ಪಶುಪಾಲನಾ ಇಲಾಖೆಯಿಂದ 226 ಚಿಕಿತ್ಸಾ ಶಿಬಿರ

skp animal
ಬೇಗೂರಿನಲ್ಲಿ ಹಮ್ಮಿಕೊಂಡಿದ್ದ ಅನುತ್ಪಾದಕ ರಾಸುಗಳ ಚಿಕಿತ್ಸಾ ಶಿಬಿರದಲ್ಲಿ ಡಾ. ರವಿಕುಮಾರ್, ಡಾ. ಶ್ರೀಧರ್ ಭಟ್, ಡಾ. ಸಂತೋಷ್ ಶಿಂಧೆ, ಕಿರಣ್ ಕುಮಾರ್ ಹರ್ತಿ, ನಾಗಪ್ಪ, ಡಾ. ಸುನೀಲ್, ಡಾ. ಶಿವಕುಮಾರ್, ಚೇತನ್ ಇತರರಿದ್ದರು.
Published on

ಶಿಕಾರಿಪುರ: ಹೈನೋದ್ಯಮ ಜನರ ಪಾಲಿಗೆ ಕಾಮಧೇನು ಇದ್ದಂತೆ. ಹಾಲು ಉತ್ಪಾದಕರು ರಾಸುಗಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರವಿಕುಮಾರ್ ಹೇಳಿದರು.
ಬೇಗೂರಿನಲ್ಲಿ ಮಂಗಳವಾರ ಪಶುಪಾಲನಾ, ಕೃಷಿ ಹಾಗೂ ಜಲಾನಯನ ಇಲಾಖೆ ಆಯೋಜಿಸಿದ್ದ ಅನುತ್ಪಾದಕ ರಾಸುಗಳ ವಿಶೇಷ ಆರೋಗ್ಯ ತಪಾಸಣೆಯಲ್ಲಿ ಮಾತನಾಡಿ, ಈಗಾಗಲೇ 226 ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ 9,774 ರಾಸುಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ _ಶೇ.73 ರಾಸುಗಳು ಗರ್ಭ ಧರಿಸಿವೆ ಎಂದರು.
ಪ್ರತಿ ಶಿಬಿರಗಳಲ್ಲಿ ತಜ್ಞ ವೈದ್ಯರನ್ನು ಕರೆಸಿ ಹಾಲು ಉತ್ಪಾದಕರಿಗೆ ಮಾಹಿತಿ ಮತ್ತು ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಶಿಬಿರಗಳಿಂದ ಗೋವು ಮತ್ತು ಜಾನುವಾರು ಸಾಕಣೆ ಮಾಡುವ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಹಾಲು ಉತ್ಪಾದನೆ ಕುಂಠಿತವಾಗದಂತೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ ವೈದ್ಯರು ಜಾನುವಾರುಗಳಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಪಶುವೈದ್ಯಕೀಯ ವಿವಿ ತಜ್ಞ ವೈದ್ಯರಾದ ಡಾ. ಶ್ರೀಧರ್ ಭಟ್ ಮತ್ತು ಡಾ. ಸಂತೋಷ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಜಾನುವಾರುಗಳ ತಪಾಸಣೆ ಮಾಡಲಾಗಿದೆ. ಬೇಗೂರು ಉಪಜಲಾನಯನ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಜಾನುವಾರುಗಳಿಗೆ ತೊಂದರೆಯಾದಲ್ಲಿ ಕೂಡಲೆ ಪಶುವೈದ್ಯರನ್ನು ಸಂಪರ್ಕಿಸಬೇಕು. ಈಗ ಸಂಚಾರಿ ಪಶು ಚಿಕಿತ್ಸಾಲಯ ಕೂಡ ಲಭ್ಯವಿದೆ ಎಂದು ಹೇಳಿದರು.
ಪಶು ವೈದ್ಯಕೀಯ ವಿವಿಯ ಡಾ. ಶ್ರೀಧರ್ ಭಟ್, ಡಾ. ಸಂತೋಷ್ ಶಿಂಧೆ, ಕೃಷಿ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ, ಕೃಷಿ ಅಧಿಕಾರಿ ನಾಗಪ್ಪ, ಡಾ. ಸುನೀಲ್, ಡಾ. ಶಿವಕುಮಾರ್, ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net