225 ಕೆಜಿ ಗಾಂಜಾ ಚಾಕೊಲೇಟ್ ಜಪ್ತಿ; ಆರ್‌ಎಂಸಿ ಯಾರ್ಡ್ ಪೊಲೀಸರಿಂದ ಉತ್ತರ ಪ್ರದೇಶದ ಮೂಲದ ಪೆಡ್ಲರ್ ಸೆರೆ

ganja
Published on

ಬೆಂಗಳೂರು: ಮಂಗಳೂರು, ರಾಯಚೂರಿನಲ್ಲಿ ಪತ್ತೆಯಾದ ಮಾದಕ ವಸ್ತು ಮಿಶ್ರಿತ ಚಾಕೊಲೇಟ್ ದಂಧೆ ಇದೀಗ ಸಿಲಿಕಾನ್ ಸಿಟಿಗೂ ಕಾಲಿಟ್ಟಿದೆ. ಆರ್‌ಎಂಸಿ ಯಾರ್ಡ್ ಪೊಲೀಸರು ಬರೋಬ್ಬರಿ 225 ಕೆಜಿ ಡ್ರಗ್ಸ್ ಚಾಕೊಲೇಟ್‌ನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಖಾನಪುರ ಮೂಲದ ಶಮೀಮ್ ಅಖ್ತರ್ ಬಂಧಿತ. ಉತ್ತರ ಪ್ರದೇಶದಿಂದ ಡ್ರಗ್ಸ್ ಮಿಶ್ರಿತ ಚಾಕೊಲೇಟ್‌ನ್ನು ನಗರಕ್ಕೆ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 6 ಲಕ್ಷ ರೂ. ಮೌಲ್ಯದ ಮನೋಕಾ, ಆನಂದ್, ಚಾರ್‌ಮಿನಾರ್ ಹೆಸರಿನ 225 ಕೆಜಿ ಡ್ರಗ್ಸ್ ಚಾಕೊಲೇಟ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಸಂಜಯ್, ಗೋವಿಂದ ಮತ್ತು ವಿನೋದ್ ಬಂಧನಕ್ಕೆ ಬಲೆಬೀಸಿರುವುದಾಗಿ ಉತ್ತರ ವಿಭಾಗ ಡಿಸಿಪಿ ಶಿವ ಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿನ ಪೆಡ್ಲರ್‌ಗಳನ್ನು ಸಂಪರ್ಕ ಮಾಡಿ ಕಡಿಮೆ ಬೆಲೆಗೆ ಡ್ರಗ್ಸ್ ಚಾಕೊಲೇಟ್‌ಗಳನ್ನು ಶಮೀಮ್ ಅಖ್ತರ್, ಖರೀದಿಸಿ ರೈಲಿನ ಮೂಲಕ ಪಾರ್ಸೆಲ್‌ನಲ್ಲಿ ನಗರಕ್ಕೆ ತರುತ್ತಿದ್ದ. ಇಲ್ಲಿನ ಸಬ್ ಪೆಡ್ಲರ್‌ಗಳಾದ ಸಂಜಯ್, ಗೋವಿಂದ ಮತ್ತು ವಿನೋದ್ ಎಂಬುವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ.ಈ ಮೂವರು ಖರೀದಿಸಿದ್ದ ಚಾಕೊಲೇಟ್‌ಗಳನ್ನು ಪರಿಚಯಸ್ಥ ಗಿರಾಣಿ ಅಂಗಡಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಖರೀದಿಸಿ ಸೇವಿಸಿದ ವ್ಯಸನಿ ಮತ್ತೆ ಮತ್ತೆ ಬರುತ್ತಿದ್ದ. ಪರಿಚಯಸ್ಥ ಗ್ರಾಹಕರಿಗೆ ಮಾತ್ರ ವ್ಯಾಪಾರಸ್ಥರು ಮಾರಾಟ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಪ್ರತಿ ಚಾಕೊಲೇಟ್ ಬೆಲೆ 50 ರಿಂದ 60 ರೂ. ನಿಗದಿ ಮಾಡಲಾಗಿತ್ತು.

ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇಲೆ ಇನ್‌ಸ್ಪೆಕ್ಟರ್ ಪಿ. ಸುರೇಶ್ ನೇತೃತ್ವದ ತಂಡ ಮಫ್ತಿಯಲ್ಲಿ ನಿಗಾ ವಹಿಸಿ ಆಗಸ್ಟ್ 23ರಂದು ಆರ್‌ಎಂಸಿ ಯಾರ್ಡ್ ಸಮೀಪದ ಲಾರಿ ನಿಲ್ದಾಣ ಮುಂಭಾಗ ಆಟೋ ರಿಕ್ಷಾದಲ್ಲಿ ಚಾಕೊಲೇಟ್ ಬಾಕ್ಸ್ ಸಾಗಾಟ ಮಾಡುತ್ತಿದ್ದಾಗ ತಡೆ ಪರಿಶೀಲನೆ ನಡೆಸಿದ್ದರು. ಅದರ ವಾರಸುದಾರ ಶಮೀಮ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡ್ರಗ್ಸ್ ಮಿಶ್ರಿತ ಚಾಕೊಲೇಟ್ ದಂಧೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net