ಬಾಲ್ಯದ ಸ್ನೇಹಿತನ ಸೋಗಿನಲ್ಲಿ ಮಹಿಳೆಗೆ 22 ಲಕ್ಷ ರೂ., 750 ಗ್ರಾಂ ಚಿನ್ನಾಭರಣ ವಂಚನೆ,

cabdriver
Published on

ಬೆಂಗಳೂರು: ಬಾಲ್ಯದ ಸ್ನೇಹಿತನ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿ ಸಹಾಯದ ನೆಪದಲ್ಲಿ 22 ಲಕ್ಷ ರೂ. ಮತ್ತು 750 ಗ್ರಾಂ ಚಿನ್ನಾಭರಣ ದೋಚಿದ್ದ ಕ್ಯಾಬ್ ಚಾಲಕನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಹೆಸರುಘಟ್ಟ ಮೂಲದ ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ ಬಂಧಿತ. ಆರೋಪಿಯಿಂದ ಮಹಿಳೆಯಿಂದ ಸುಲಿಗೆ ಮಾಡಿದ್ದ 900 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಇಂದಿರಾನಗರದಲ್ಲಿ ಪತಿ ಜೊತೆಗೆ ನೆಲೆಸಿರುವ ನೊಂದ ಮಹಿಳೆ, ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾಳೆ. 2022ರ ನವೆಂಬರ್‌ನಲ್ಲಿ ಇಂದಿರಾನಗರದಿಂದ ಬಾಣಸವಾಡಿಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಚಾಲಕ ಕಿರಣ್, ಬಂದು ಕರೆದುಕೊಂಡು ಹೋಗಿದ್ದ. ಕಾರಿನಲ್ಲಿ ಪ್ರಯಾಣ ಮಾಡುವಾಗ ಮಹಿಳೆ, ತನ್ನ ಬಾಲ್ಯದ ಸ್ನೇಹಿತನಿಗೆ ಕಾಲ್ ಮಾಡಿ ತನ್ನ ಕೌಟುಂಬಿಕ ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದಳು. ಇದೇ ರೀತಿ ಎರಡು ಬಾರಿ ಕಿರಣ್ ಕ್ಯಾಬ್‌ನಲ್ಲಿ ಪ್ರಯಾಣ ಮಾಡುವಾಗ ಸ್ನೇಹಿತನ ಜೊತೆಗೆ ಮಹಿಳೆ ಸಂಭಾಷಣೆ ನಡೆಸಿದ್ದಳು.

ಇದನ್ನು ಗಮನವಿಟ್ಟು ಕೇಳಿಸಿಕೊಂಡಿದ್ದ ಕಿರಣ್, ಕ್ಯಾಬ್ ಬುಕ್ ಮಾಡಲು ಮಹಿಳೆ ಬಳಸಿದ್ದ ಮೊಬೈಲ್ ನಂಬರ್‌ನ್ನು ಸೇವ್ ಮಾಡಿಕೊಂಡಿದ್ದ. ಸ್ವಲ್ಪ ದಿನಗಳ ಬಳಿಕ ಹೊಸ ಮೊಬೈಲ್ ನಂಬರ್ ತೆಗೆದುಕೊಂಡು ಆ ನಂಬರ್‌ನಿಂದ ಮಹಿಳೆಗೆ ಎಸ್‌ಎಂಎಸ್ ಮಾಡಿ ಬಾಲ್ಯದ ಸ್ನೇಹಿತ ಎಂದು ಚಾಟ್ ಶುರು ಮಾಡಿದ್ದ. ದಿನ ಕಳೆದಂತೆ ಮಹಿಳೆ, ತನ್ನ ಸ್ನೇಹಿತ ಎಂದು ನಂಬಿ ಕಷ್ಟಸುಖಗಳನ್ನು ಹೇಳಿಕೊಳ್ಳುತ್ತಿದ್ದಳು. ಮಹಿಳೆಯ ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಕಿರಣ್, ಸ್ವಲ್ಪ ದಿನಗಳ ಬಳಿಕ ತನ್ನ ಮನೆಯ ಕಡೆ ಕಷ್ಟಗಳು ಇರುವುದಾಗಿ ಹೇಳಿ ಧನ ಸಹಾಯ ಕೋರಿದ್ದ.

ಬಾಲ್ಯ ಸ್ನೇಹಿತ ಎಂದು ಕನಿಕರ ತೋರಿಸಿದ ಮಹಿಳೆ, ಆನ್‌ಲೈನ್‌ನಲ್ಲಿ ಹಣ ಕಳುಹಿಸುತ್ತಿದ್ದಳು. ಹೀಗೆ ಹಂತ ಹಂತವಾಗಿ 22 ಲಕ್ಷ ರೂ.ಗಳನ್ನು ಆನ್‌ಲೈನ್‌ನಲ್ಲಿ ವಸೂಲಿ ಮಾಡಿಕೊಂಡಿದ್ದ. ಈ ಹಣದಲ್ಲಿ ಕಿರಣ್, ಮೋಜು ಮಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಹಣ ಇಲ್ಲವೆಂದು ಮಹಿಳೆ ಹೇಳಿದಾಗ ಚಿನ್ನಾಭರಣ ಕೊಟ್ಟರೇ ಅಡವಿಟ್ಟು ವಾಪಸ್ ಬಿಡಿಸಿಕೊಡುತ್ತೆನೆ ಎಂದು ಆಭರಣ ಸಹ ಪಡೆದುಕೊಂಡಿದ್ದ. ಕೊನೆಗೊಂದು ಅನುಮಾನ ಬಂದು ಪ್ರಶ್ನಿಸಿದಾಗ ಕ್ಯಾಬ್ ಚಾಲಕನ ಬಣ್ಣ ಬಯಲಾಗಿದೆ.

ಆನಂತರ ಹಣ ಮತ್ತು ಆಭರಣ ಕೊಡಲು ನಿಲ್ಲಿಸಿದಾಗ ಕಿರಣ್, ಮಹಿಳೆಗೆ ಕರೆ ಮಾಡಿ ಹಣ ಅಥವಾ ಚಿನ್ನ ಕೊಡದೆ ಇದ್ದರೇ ನಿನ್ನ ಮತ್ತು ನಿನ್ನ ಬಾಲ್ಯದ ಸ್ನೇಹಿತನ ನಡುವಿನ ವಿಚಾರವನ್ನು ಗಂಡನಿಗೆ ತಿಳಿಸುತ್ತೆನೆ. ನಿನ್ನ ಸ್ನೇಹಿತರಿಗೆ ಮತ್ತು ಜಾಲತಾಣದಲ್ಲಿ ಆಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಶುರು ಮಾಡಿದ್ದ. ಆಗಲೂ ನೊಂದ ಮಹಿಳೆ,ಚಿನ್ನಾಭರಣ ಕೊಟ್ಟಿದ್ದಳು. ಕೊನೆಗೊಂದು ದಿನ ಪತಿಗೆ ವಿಚಾರ ಗೊತ್ತಾಗಿ ರಾಮಮೂರ್ತಿನಗರ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಚಿನ್ನಾಭರಣ ಸ್ವೀಕರಿಸಿದ್ದ :

ಮಹಿಳೆ, ಚಿನ್ನಾಭರಣ ಕೊಡಲು ಒಪ್ಪಿದ್ದಾಗ ಕಿರಣ್ ಕುಮಾರ್ ಸ್ವೀಕರಿಸಲು ಖುದ್ದು ಬರುತ್ತಿದ್ದ. ಅಂದರೇ ಬಾಲ್ಯದ ಸ್ನೇಹಿತ ಸೋಗಿನಲ್ಲಿ ಕರೆ ಮಾಡಿ ಕಿರಣ್‌ಕುಮಾರ್ ಎಂಬಾತ ಬರುತ್ತಾನೆ. ಆತನ ಕಡೆ ಆಭರಣ ಕೊಡುವಂತೆ ಹೇಳುತ್ತಿದ್ದ. ಆದರೆ, ಮಾತ್ರ ಕಿರಣ್‌ಕುಮಾರ್‌ನೇ ಬಂದು ನಿಮ್ಮ ಸ್ನೇಹಿತ ಕಳುಹಿಸಿದರು ಎಂದು ಹೇಳಿ ಆಭರಣ ಪಡೆಯುತ್ತಿದ್ದ. ಮೂರ‌್ನಾಲ್ಕು ಬಾರಿ ಆಭರಣ ಪಡೆದ ಮೇಲೆ ಮಹಿಳೆಗೆ ಅನುಮಾನ ಬಂದು ಪ್ರಶ್ನೆ ಮಾಡಿ ಮೊಬೈಲ್ ನಂಬರ್ ಪರಿಶೀಲನೆ ನಡೆಸಿದಾಗ ಕ್ಯಾಬ್ ಚಾಲಕನ ಬಣ್ಣ ಬಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net