

ಕೈವ್: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನನೊಂಡು 22 ಮಂದಿ ಸಜೀವ ದಹನವಾಗಿರುವ ಘಟನೆ ಉಕ್ರೇನ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವಿಮಾನವು ವಾಯುಯಾನ ಶಾಲಾ ವಿದ್ಯಾರ್ಥಿಗಳನ್ನು ಹೊತ್ತು ಬರುತ್ತಿತ್ತು. ನಿಲ್ದಾಣದಲ್ಲಿ ಇನ್ನೇನು ಲ್ಯಾಂಡಿಂಗ್ ಆಗಬೇಕೆನ್ನುವಷ್ಟರಲ್ಲಿ ಪತನಗೊಂಡಿದೆ. ಅಲ್ಲದೆ, ವಿಮಾನವು ಸ್ಫೋಟಿಸಿ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗಿದೆ ಎಂದು ಉಕ್ರೇನ್ನ ತುರ್ತು ಸೇವಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ನಿಂದ ಸುಮಾರು 400 ಕಿ.ಮೀ ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ.
ವಿಮಾನದಲ್ಲಿ ಸೇನಾ ಸಿಬ್ಬಂದಿಯು ಸಹ ಇದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ದೇಶದ ರಕ್ಷಣಾ ಸಚಿವಲಾಯದ ವಾಯುಯಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತನಕ್ಕೆ ಕಾರಣವೇನೆಂಬುದು ಈ ಕ್ಷಣದವರೆಗೂ ನಿಖರವಾಗಿ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಆದೇಶಿಸಲಾಗಿದೆ. (ಏಜೆನ್ಸೀಸ್)