

ನವದೆಹಲಿ: ಭಾರತೀಯ ಸೇನೆಯ ಎಂಟು ಸಿಬ್ಬಂದಿಗೆ ಕರೊನಾ ವೈರಸ್ ಇರುವುದು ದೃಢಪಟ್ಟ ಬೆನ್ನಲ್ಲೇ ಇನ್ನೊಂದು ಆತಂಕಕಾಗಿ ವಿಚಾರ ಹೊರಬಿದ್ದಿದೆ.
ಭಾರತೀಯ ನೌಕಾಪಡೆಯ 21 ಸೈನಿಕರಲ್ಲಿ ಕರೊನಾ ವೈರಸ್ ದೃಢಪಟ್ಟಿದೆ. ಮುಂಬೈನ ನೌಕಾ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ 21 ಮಂದಿಗೆ ಕರೊನಾ ಪಾಸಿಟಿವ್ ಆಗಿದ್ದು, ಉಳಿದ ಸಿಬ್ಬಂದಿಯಲ್ಲೂ ಆತಂಕ ಶುರುವಾಗಿದೆ.
ಕರೊನಾ ಸೋಂಕಿತರಲ್ಲಿ 20 ಮಂದಿ ಐಎನ್ಎಸ್ ಆ್ಯಂಗ್ರೆ ನೌಕಾ ಹಡಗಿನಲ್ಲಿ ನಾವಿಕರು. 21 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡ ಬೆನ್ನಲ್ಲೇ ಇನ್ನೂ ಅನೇಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.
ಭಾರತೀಯ ನೌಕಾನೆಲೆಯಲ್ಲಿ ಕರೊನಾ ಭೀತಿ ಶುರುವಾಗಿದೆ.
ಏಪ್ರಿಲ್ 7ರಂದು ಓರ್ವ ಸಿಬ್ಬಂದಿಯಲ್ಲಿ ಕರೊನಾ ವೈರಸ್ ದೃಢಪಟ್ಟಿತ್ತು. ಆತನ ಪ್ರಾಥಮಿಕ ಸಂಪರ್ಕಕ್ಕೆ ಹೋದವರನ್ನೆಲ್ಲ ತಪಾಸಣೆಗೆ ಒಳಪಡಿಸಲಾಗಿತ್ತು. ಈ 21ಜನರಲ್ಲಿ ಕರೊನಾ ಸೋಂಕು ಪಾಸಿಟಿವ್ ಎಂದು ಬಂದಿದ್ದರೂ ಅವರಲ್ಲಿ ಯಾವುದೇ ಲಕ್ಷಣಗಳೂ ಗೋಚರ ಆಗುತ್ತಿಲ್ಲ. ಹಾಗಾಗಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದೆ.
ಈ ನೌಕಾನೆಲೆಯನ್ನು ಕರೊನಾ ಅಪಾಯ ಮಟ್ಟದಲ್ಲಿರುವ ವಲಯ ಎಂದು ಗುರುತಿಸಲಾಗಿದ್ದು, ಐಎನ್ಎಸ್ ಆ್ಯಂಗ್ರೆ ಹಡಗನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಈ ಹಡಗಿನಿಂದ ಕೆಲವೇ ಮೀಟರ್ ಅಂತದಲ್ಲಿ ಇದ್ದ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ಹಡಗುಗಳಿಗೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ.(ಏಜೆನ್ಸೀಸ್)