

ದಾವಣಗೆರೆ: ಕರೊನಾ ಕೆಟ್ಟ ಕಣ್ಣು ದಾವಣಗೆರೆ ಮೇಲೆ ವಕ್ಕರಿಸಿದೆ. ಇಂದು ಬರೋಬ್ಬರಿ 21 ಹೊಸ ಕರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ತೀವ್ರ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಸೋಂಕಿಗೆ ಒಳಗಾದವರ ಪ್ರಾಥಮಿಕ ಸಂಪರ್ಕಕ್ಕೆ ಹೋದವರನ್ನೆಲ್ಲ ಗುರುತಿಸಿ ಕ್ವಾರಂಟೈನ್ ಮಾಡಲಾಗಿತ್ತು. ಹಾಗೇ ಮೊನ್ನೆ ( ಶುಕ್ರವಾರ) 94 ಜನರ ಮತ್ತು ನಿನ್ನೆ (ಶನಿವಾರ) 74 ಮಂದಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿತ್ತು.
ಈಗ 37 ಜನರ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 21 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಂತೇಶ್ ಬಿಳಗಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಇನ್ನೂ 296 ಮಂದಿಯ ರಿಪೋರ್ಟ್ ಬರಬೇಕಿದೆ. ಇದು ಪ್ರಾಥಮಿಕ ವರದಿ. ಎರಡನೇ ರಿಪೋರ್ಟ್ ಬಳಿಕವಷ್ಟೇ ಪೇಷೆಂಟ್ ನಂಬರ್ ನೀಡುತ್ತೇವೆ. ಬಾಷಾ ನಗರ ಮತ್ತು ಜಾಲಿನಗರಗಳು ಸಂಪೂರ್ಣ ಸೀಲ್ಡೌನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆಷ್ಟೇ ದಾವಣಗೆರೆಯಲ್ಲಿ ಕರೊನಾದಿಂದ ಮೊದಲ ಸಾವಾಗಿತ್ತು. ಜಾಲಿನಗರ 69ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದರು.
ಇದೀಗ ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635ಕ್ಕೇರಿದ್ದು, 25 ಮಂದಿ ಮೃತಪಟ್ಟಿದ್ದಾರೆ. 293 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.