

ಬೀಜಿಂಗ್: ಚೀನಾದ ಪ್ರಮುಖ ಕೈಗಾರಿಕಾ ನಗರಿ ಗುವಾಂಗ್ ಡಾಂಗ್ ನಗರದಲ್ಲಿ ಭಾರಿ ಸುಂಟರಗಾಳಿ ಬೀಸಿದ ಪರಿಣಾಮ ಕನಿಷ್ಠ ಐದು ಜನರು ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು!
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ (ಸ್ಥಳೀಯ ಕಾಲಮಾನ) ಸುಂಟರಗಾಳಿ ಗುವಾಂಗ್‌ಡಾಂಗ್ ಪ್ರಾಂತ್ಯದ ರಾಜಧಾನಿಗೆ ಅಪ್ಪಳಿಸಿತು.
ಗುವಾಂಗ್‌ಡಾಂಗ್ ಚೀನಾದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಇಲ್ಲಿ 19 ಮಿಲಿಯನ್ ಜನರು ನೆಲೆಸಿದ್ದು, ದೇಶದ ಕೈಗಾರಿಕಾ ಕೇಂದ್ರ ಎಂದು ಗುರುತಿಸಿಕೊಂಡಿದೆ. ರಾಷ್ಟ್ರದ ರಫ್ತು ವಲಯಕ್ಕೆ ಶಕ್ತಿ ತುಂಬುವ ಸಾವಿರಾರು ಕಾರ್ಖಾನೆಗಳನ್ನು ಹೊಂದಿದೆ.
ಸುಂಟರಗಾಳಿ ತೀವ್ರತೆ ಎಷ್ಟಿತ್ತೆಂದರೆ ಸುಮಾರು 141 ಕಾರ್ಖಾನೆಗಳು ಹಾನಿಗೊಳಗಾಗಿವೆ. ಆದರೆ, ಘಟನೆಯಲ್ಲಿ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಳಿ ಬೀಸುತ್ತಿದ್ದಂರೆ ಆಕಾಶದಲ್ಲಿ ಕತ್ತಲೆ ಆವರಿಸಿತ್ತು.
ಈ ವಾರದ ಆರಂಭದಲ್ಲಿ ಗುವಾಂಗ್‌ಡಾಂಗ್‌ನಲ್ಲಿ ಧಾರಾಕಾರ ಮಳೆಯಾಗಿದ್ದು, ಪ್ರವಾಹ ಸ್ಥಿತಿ ಏರ್ಪಟ್ಟಿತ್ತು. ಇದರಲ್ಲಿ ನಾಲ್ವರು ಮೃತಪಟ್ಟಿದ್ದರು. 1950ರ ನಂತರ ಈ ಪ್ರಾಂತ್ಯವು ಕಂಡ ಅತ್ಯಂತ ಭೀಕರ ಪ್ರವಾಹ ಇದಾಗಿತ್ತು ಎನ್ನಲಾಗುತ್ತಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಜಿಯಾಂಗ್‌ಸು ಪ್ರಾಂತ್ಯದ ಸುಕಿಯಾನ್‌ನಲ್ಲಿ ಸುಂಟರಗಾಳಿ ಅಪ್ಪಳಿಸಿ ಕನಿಷ್ಠ 10 ಜನ ಮೃತಪಟ್ಟಿದ್ದರು. 2021 ರಲ್ಲಿ, ಒಂದೇ ದಿನದಲ್ಲಿ ಎರಡು ಸುಂಟರಗಾಳಿಗಳು ದೇಶವನ್ನು ಅಪ್ಪಳಿಸಿದವು.
ಈ ನಡುವೆ ಈ ತಿಂಗಳ ಅಂತ್ಯದವರೆಗೆ ಭಾರಿ ಮಳೆ ಮತ್ತು ಬಲವಾದ ಚಂಡಮಾರುತಗಳನ್ನು ನಿರೀಕ್ಷಿಸಬಹುದು ಎಂದು ಚೀನಾದ ಹವಾಮಾನ ಸಂಸ್ಥೆ ಎಚ್ಚರಿಸಿದೆ.