

ಬೆಂಗಳೂರು: ನಗರದಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ನಗರ ಸಂಚಾರ ಪೊಲೀಸರು ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ ೨,೦೩೦ ಪಾನಮತ್ತ ಚಾಲಕರು/ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ಕಳೆದ ಆ.೧ರಿಂದ ೩೧ ರವರೆಗೆ ನಗರದ ೫೦ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸಿ ಸಿಕ್ಕಿಬಿದ್ದ ೨,೦೩೦ ಚಾಲಕರು/ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪಾನಮತ್ತರಾಗಿ ವಾಹನ ಚಲಾಯಿಸುವವರ ಹಾವಳಿ ತಡೆಗಟ್ಟಲು ಮತ್ತು ರಸ್ತೆ ಸುರಕ್ಷತೆಗಾಗಿ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.