2024ರ ಲೋಕಸಭೆ ಚುನಾವಣೆಯ ಮೇಲೆ ಬಿಜೆಪಿ ಚಿತ್ತ; ಗುಜರಾತ್ ಚುನಾವಣೆ ದಿಕ್ಸೂಚಿ ಮೋದಿ - ಅಮಿತ್ ಷಾಗೆ ಪ್ರತಿಷ್ಠೆಯ ಕಣ

Modi Shah
Published on

ನವದೆಹಲಿ: 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಸ್ವಂತ ರಾಜ್ಯ ಗುಜರಾತ್​ನ್ನು ಗೆದ್ದುಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾಗೆ ಅತ್ಯಂತ ಮಹತ್ವವಾದುದು. ಎರಡೂ ಮುಕ್ಕಾಲು ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ಗುಜರಾತ್​ನಲ್ಲಿ ಹಿನ್ನಡೆ ಸಾಧಿಸಿದಲ್ಲಿ ವಿಪಕ್ಷಗಳು ಚಿಗಿತುಕೊಂಡು, ದೇಶಾದ್ಯಂತ ರಾಜಕೀಯ ನಿರೂಪಣೆಯೇ ಬದಲಾಗಬಹುದು.

2024ಕ್ಕೆ ಮುನ್ನ ಮೋದಿ-ಷಾ ವರ್ಚಸ್ಸು ತಗ್ಗಿದೆ, ದೇಶದಲ್ಲಿ ಜನಾಭಿಪ್ರಾಯ ಬದಲಾಗುತ್ತಿದೆ ಎಂಬ ಸಂದೇಶ ಯಾವುದೇ ಕಾರಣಕ್ಕೂ ರವಾನೆಯಾಗಬಾರದು ಎಂದರೆ ಗುಜರಾತ್ ಗೆದ್ದುಕೊಳ್ಳಬೇಕು ಎಂಬ ವಾಸ್ತವ ಮೋದಿ-ಷಾ ಇಬ್ಬರಿಗೂ ತಿಳಿದಿದೆ. ಹೀಗಾಗಿಯೇ, ಮೋದಿ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಹಲವು ಸಚಿವರು ಕಳೆದ ಕೆಲ ತಿಂಗಳಲ್ಲಿ ಹಲವು ಬಾರಿ ಗುಜರಾತ್​ಗೆ ಭೇಟಿ ನೀಡಿ ಬಂದಿದ್ದಾರೆ. ಕೆಲ ಕೇಂದ್ರ ಸಚಿವರು ಈಗಾಗಲೇ ರಾಜ್ಯದಲ್ಲಿ ಠಿಕಾಣಿ ಹೂಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ದಿನಾಂಕಗಳನ್ನು ಒಟ್ಟಿಗೆ ಘೊಷಿಸಲಾಗುತ್ತಿತ್ತು. ಆದರೆ, ಅಚ್ಚರಿ ಎಂಬಂತೆ ಈ ಬಾರಿ ಹಿಮಾಚಲದ ನಂತರ ಗುಜರಾತ್ ಗೆ ದಿನಾಂಕ ನಿಗದಿ ಮಾಡಲಾಗಿದೆ. ಹಿಮಾಚಲ ದಿನಾಂಕ ಘೊಷಣೆ ಬಳಿಕ ಪಿಎಂ ಮೋದಿ ತವರು ರಾಜ್ಯಕ್ಕೆ ತೆರಳಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೊಷಿಸಿ ಬಂದಿದ್ದಾರೆ.

ಗ್ರಾಮೀಣ ಮತದಾರರತ್ತ ಕಣ್ಣು: 2017ರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತು ಗೆಲುವಿನ ದಡ ಸೇರಿಸಿದ್ದು ನಗರದ ಮತದಾರರು. ಕಾಂಗ್ರೆಸ್ ಗೆಲುವಿನ ಸನಿಹಕ್ಕೆ ಬಂದು ನಂತರ ಸೋಲನ್ನೊಪ್ಪಿಕೊಂಡಿತ್ತು. ಈ ಬಾರಿ ಶಿಕ್ಷಣ, ನೌಕರಿ, ಆರೋಗ್ಯ ಸೇರಿದಂತೆ ಮಧ್ಯಮ ಹಾಗೂ ಬಡ ಮತದಾರರನ್ನು ಸೆಳೆವ ತಂತ್ರ ಹೆಣೆದಿರುವ ಕೇಜ್ರಿವಾಲ್ ಬಿಜೆಪಿಯಿಂದ ಅಸಮಾಧಾನಗೊಂಡಿರುವ ಗ್ರಾಮೀಣರು ಹಾಗೂ ಯುವ ಮತವರ್ಗದತ್ತ ಹೆಚ್ಚು ದೃಷ್ಟಿ ನೆಟ್ಟಿದೆ. ನಿರುದ್ಯೋಗದಿಂದ ಜನ ತತ್ತರಿಸಿದ್ದಾರೆ ಎಂಬ ಅಭಿಯಾನ ಜೋರಾಗಿ ನಡೆದಿದೆ.

ಗೆಲುವಿನ ಇತಿಹಾಸ: ರಾಜ್ಯದಲ್ಲಿ ಕ್ರಮವಾಗಿ 1962, 1967 ಮತ್ತು 1972ರಲ್ಲಿ ನಡೆದ ಮೊದಲ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆಯಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಪಕ್ಷಗಳ ಮೈತ್ರಿ, ಜನಸಂಘ ಮತ್ತು ಕಾಂಗ್ರೆಸ್​ನ ಬಂಡಾಯ ನಾಯಕ ಚಿಮನ್​ಭಾಯ್ ಪಟೇಲ್ ವಿರುದ್ಧ ಕಾಂಗ್ರೆಸ್ ಸೋಲುಂಡಿತ್ತು. ಇದಾಗಿ, 1980 ಮತ್ತು 1985ರ ಎರಡು ಚುನಾವಣೆಗಳಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು. 1990ರಲ್ಲಿ ಜನತಾದಳ ಮತ್ತು ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದವು. 1995ರಿಂದ ನಡೆದ ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. 1996 ರಿಂದ 1998ರ ಮಧ್ಯೆ ಬಿಜೆಪಿ ನಾಯಕ ಶಂಕರಸಿಂಗ್ ವಘೕಲಾ ಬಂಡಾಯವೆದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು.

ಏಕೈಕ ಮತದಾರ!

ಗಿರ್ ಅರಣ್ಯದ ಬನೇಜ್​ನಲ್ಲಿ ಭರತ್​ದಾಸ್ ದರ್ಶನದಾಸ್ ಎಂಬ ಏಕೈಕ ಮತದಾರನಿಗಾಗಿ ಮತದಾನ ಕೇಂದ್ರ ಸ್ಥಾಪನೆಯಾಗಲಿದೆ. ಈ ಹಿಂದೆಯೂ ಆತನಿಗಾಗಿ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಗಿರ್ ಸೋಮನಾಥ ಜಿಲ್ಲೆಯ ಮಧುಪುರ್ ಜಂಬೂರಿನಲ್ಲಿ ಸಿದ್ದಿಗಳಿಗಾಗಿ ಮೂರು ಮತಗಟ್ಟೆಗಳನ್ನು ಆಯೋಗ ಸ್ಥಾಪಿಸುತ್ತಿದೆ. ಸಿದ್ಧಿಗಳು 14 ಮತ್ತು 17 ನೇ ಶತಮಾನದಲ್ಲಿ ಭಾರತಕ್ಕೆ ಬಂದ ಪೂರ್ವ ಆಫ್ರಿಕಾದ ಜನಾಂಗದವರಾಗಿದ್ದು, ಅಲ್ಲಿನ 3,481 ಮತದಾರರಲ್ಲಿ ಶೇ.90ರಷ್ಟು ಮಂದಿ ಸಿದ್ಧಿ ಸಮುದಾಯದವರಾಗಿದ್ದಾರೆ.

ಶಿಪ್ಪಿಂಗ್ ಕಂಟೇನರ್​ನ ಮತಗಟ್ಟೆ!

ಈ ಬಾರಿ ರಾಜ್ಯದ ಕರಾವಳಿಯಲ್ಲಿರುವ ದ್ವೀಪವೊಂದರ 200ಕ್ಕೂ ಹೆಚ್ಚು ಮತದಾರರಿಗೆ ಶಿಪ್ಪಿಂಗ್ ಕಂಟೈನರ್​ನಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಭರೂಚ್ ಜಿಲ್ಲೆಯ ಹತ್ತಿರದ ಮತಗಟ್ಟೆಗೆ ದೀರ್ಘ ಪ್ರಯಾಣ ಕೈಗೊಳ್ಳುವುದು ತಪ್ಪಲಿದೆ. ಜಿಲ್ಲೆಯ ವಾಗ್ರಾ ವಿಧಾನಸಭಾ ಕ್ಷೇತ್ರದ ಶಿಯಾಲ್​ಬೆಟ್​ನಲ್ಲಿ ತಾತ್ಕಾಲಿಕ ಮತದಾನ ಕೇಂದ್ರವಾಗಿ ಶಿಪ್ಪಿಂಗ್ ಕಂಟೈನರ್ ಸ್ಥಾಪಿಸಲಾಗುವುದು.

6 ಕ್ಷೇತ್ರದಲ್ಲಿ ಬೈಎಲೆಕ್ಷನ್ ಸಂಪನ್ನ

ಆರು ರಾಜ್ಯಗಳ ಆರು ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಸರಾಸರಿ ಶೇ. 77ರಷ್ಟು ಮತದಾನ ಆಗಿದೆ. ಕೆಲವು ಸಣ್ಣಪುಟ್ಟ ಘರ್ಷಣೆ ಬಿಟ್ಟರೆ ಮತದಾಣ ಶಾಂತಿಯುತವಾಗಿ ನಡೆದಿದೆ. ಬಿಹಾರದ ಮೊಕಾಮ ಮತ್ತು ಗೋಪಾಲ್​ಗಂಜ್, ಹರಿಯಾಣದ ಅದಂಪುರ್, ತೆಲಂಗಾಣದ ಮುನುಗೋಡ್, ಉತ್ತರ ಪ್ರದೇಶದ ಗೋಲಾ ಗೋರಖನಾಥ್, ಒಡಿಶಾದ ಧಾಮನಗರ್, ಮಹಾರಾಷ್ಟ್ರದ ಅಂಧೇರಿ ಪೂರ್ವ ಕ್ಷೇತ್ರದಲ್ಲಿ ಈ ಉಪಚುನಾವಣೆ ನಡೆದಿದೆ. ಭಾನುವಾರ ಮತ ಎಣಿಕೆ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net