

ಚನ್ನಪಟ್ಟಣ : ಜಿಲ್ಲೆಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂಬ ಉದ್ದೇಶದಿಂದ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ನೀಡಿದ್ದ ಸತ್ತೇಗಾಲ ನೀರಾವರಿ ಯೋಜನೆ 2022 ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕಣ್ವ ಜಲಾಶಯದ ಬಳಿ ಈ ಯೋಜನೆಯ ಭಾಗವಾದ ಪಂಪ್‌ಹೌಸ್ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರನ್ನು ಮಳವಳ್ಳಿ ತಾಲೂಕು ಸತ್ತೇಗಾಲದಿಂದ ಗುರುತ್ವಾರ್ಕಷಣೆ ಮೂಲಕ ಇಗ್ಗಲೂರು ಜಲಾಶಯಕ್ಕೆ ತಂದು ಅಲ್ಲಿಂದ ಕಣ್ವ ಜಲಾಶಯಕ್ಕೆ ಹರಿಸಿ, ಕಣ್ವದಿಂದ ಮಂಚನಬೆಲೆ ಹಾಗೂ ವೈಜಿ ಗುಡ್ಡ ಜಲಾಶಯಕ್ಕೆ ಪೈಪ್‌ಲೈನ್ ಮೂಲಕ ಹರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ಇಡೀ ಜಿಲ್ಲೆಗೆ ಶಾಶ್ವತ ನೀರಾವರಿ ಸಾಧ್ಯವಾಗಲಿದೆ. ಈ ಯೋಜನೆ 2022ಕ್ಕೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
540 ಕೋಟಿ ರೂ. ವೆಚ್ಚದ ಈ ಯೋಜನೆ ಕಾಮಗಾರಿ ಕೆಲವು ತಾಂತ್ರಿಕ ಸಮಸ್ಯೆಯಿಂದ ತಡವಾಗಿತ್ತು. ಈಗ ಅವೆಲ್ಲವೂ ಬಗೆಹರಿದಿದ್ದು, ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಕಣ್ವ ಜಲಾಶಯದ ಬಳಿ ಪಂಪ್‌ಹೌಸ್ ಕಾಮಗಾರಿ ಡಿಸೆಂಬರ್ ಒಳಗೆ ಮುಗಿಯಲಿದೆ ಎಂದರು.
ಮಂಡ್ಯಕ್ಕೂ ಅನುಕೂಲ: ಈ ಯೋಜನೆಯಿಂದ ಮಂಡ್ಯಕ್ಕೆ ಅನ್ಯಾಯವಾಗಿದೆ. ತಮ್ಮ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಅಪಪ್ರಚಾರ ನಡೆಸಿದ್ದರು. ಆದರೆ, ಈ ಯೋಜನೆ ಕೇವಲ ರಾಮನಗರಕಷ್ಟೇ ಅಲ್ಲದೆ, ಮಂಡ್ಯ ಭಾಗಕ್ಕೂ ಅನುಕೂಲವಾಗಲಿದೆ. ಜಿಲ್ಲೆಯಂತೆ ಮಂಡ್ಯ ಜಿಲ್ಲೆಯ ಜನತೆಯೂ ನನ್ನ ಅಣ್ಣ ತಮ್ಮಂದಿರೇ. ಈ ಬಗ್ಗೆ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತು ಮಳವಳ್ಳಿ ಶಾಸಕ ಅನ್ನದಾನಿಯೊಂದಿಗೆ ಚರ್ಚಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕನಸಿನ ಯೋಜನೆ ಕಣ್ತುಂಬಿಕೊಂಡ ಎಚ್‌ಡಿಕೆ: ಇದಕ್ಕೂ ಮೊದಲು ಮುಖಂಡರು ಹಾಗೂ ಪತ್ರಕರ್ತರ ಜೊತೆಗೂಡಿ ಸತ್ತೇಗಾಲ ಬಳಿ ನಡೆಯುತ್ತಿರುವ ಯೋಜನೆಯ ಟನಲ್ ಕಾಮಗಾರಿಯನ್ನು ಎಚ್‌ಡಿಕೆ ವೀಕ್ಷಿಸಿದರು. ಗುತ್ತಿಗೆ ಕಂಪನಿಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಜತೆ 1.5 ಕಿ.ಮೀ. ಉದ್ದದ ಸುರಂಗದ ಒಳಗೆ ಹಾದು ವೀಕ್ಷಿಸಿದರು. ಕಾಮಗಾರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಎಚ್‌ಡಿಕೆ ಈ ಯೋಜನೆಗೆ ಹಣ ನೀಡಿದ್ದು ಸಾಧನೆಯಲ್ಲ.., ಇಲ್ಲಿ ಕರ್ತವ್ಯ ನಿರ್ವಹಿಸಿರುವ ಪ್ರತಿ ಕಾರ್ಮಿಕರ ಶ್ರಮವೂ ಅಪಾರವಾದದ್ದು ಎಂದು ಶ್ಲಾಘಿಸಿದರು.