ಮಾಸ್ಕ್​ ಹಾಕದಿದ್ದರೆ 500 ರೂ. ಅಲ್ಲ, 2 ಸಾವಿರ ರೂ. ಫೈನ್​!

mask
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿನ ಸಂಖ್ಯೆ ಇಳಿಕೆಯಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಕೇರಳದಲ್ಲಿ ಮಾತ್ರ ಸೋಂಕಿನ ಸಂಖ್ಯೆ ಭಾರಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಅನೇಕ ಕ್ರಮಗಳಿಗೆ ಮುಂದಾಗಿವೆ.


ಸೋಂಕು ಹರಡದಿರುವಂತೆ ತಡೆಯಲು ಮಾಸ್ಕ್​ ಅತ್ಯವಶ್ಯಕ. ಅದೇ ಕಾರಣದಿಂದ ಎಲ್ಲ ರಾಜ್ಯಗಳಲ್ಲಿ ಮಾಸ್ಕ್​ ಬಳಕೆ ಕಡ್ಡಾಯ ಮಾಡಲಾಗಿದೆ. ಹಾಗಿದ್ದರೂ ಕೆಲವರು ಮಾಸ್ಕ್​ನ್ನು ಬಾಯಿ, ಮೂಗಿನ ಬದಲು ಕುತ್ತಿಗೆಗೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇಂತವರಿಗೆ ಬುದ್ಧಿ ಕಲಿಸುವ ಸಲುವಾಗಿ ದಂಡ ವಿಧಿಸಲಾಗುತ್ತಿದೆ. ಅಲ್ಪ ಸ್ವಲ್ಪ ದಂಡಕ್ಕೆ ಹೆದರದೆ ಮತ್ತೆ ತಪ್ಪು ಮುಂದುವರಿಸುತ್ತಿರುವುದರಿಂದಾಗಿ ದಂಡದ ಪ್ರಮಾಣವನ್ನು ಹೆಚ್ಚು ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.


ದೆಹಲಿಯಲ್ಲಿ ಈವರೆಗೆ ಮಾಸ್ಕ್​ ಹಾಕದವರಿಗೆ 500 ರೂ ದಂಡ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ದಂಡದ ಮೊತ್ತವನ್ನು 2 ಸಾವಿರ ರೂಪಾಯಿಗೆ ಏರಿಸಲಾಗುವುದು. ಈ ಕುರಿತಾಗಿ ಲೆಫ್ಟಿನೆಂಟ್ ಗವರ್ನರ್​ ಅನಿಲ್​ ಬೈಜಾಲ್​ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net