

ನವದೆಹಲಿ: ಸುಮಾರು 200 ವರ್ಷಗಳ ಹಳೆಯ ಸಂದೇಶವೊಂದು (200 year old message) ಇತ್ತೀಚೆಗೆ ಪುರಾತತ್ವ ಇಲಾಖೆಯ ಉತ್ಖನನ(Excavations)ದಲ್ಲಿ ಹೊರಬಿದ್ದಿದೆ. ಫ್ರಾನ್ಸ್‌ನ (France) ನಾರ್ಮಂಡಿ ಪ್ರದೇಶದಲ್ಲಿ ಸ್ವಯಂಸೇವಕರ ಗುಂಪೊಂದು ಉತ್ಖನನ ಮಾಡುವ ಸಮಯದಲ್ಲಿ ಪತ್ತೆಯಾದ ಗಾಜಿನ ಬಾಟಲಿಯಲ್ಲಿ ಸಂದೇಶವು ಕಂಡುಬಂದಿದೆ.
ಗಾಜಿನ ಬಾಟಲಿಯ ಒಳಗೆ ಪತ್ರವೊಂದನ್ನ ಸುತ್ತಿ ಇಡಲಾಗಿದೆ. ಈ ಪತ್ರವು ನಾರ್ಮಂಡಿ ಪಟ್ಟಣದ ಸಮೀಪವಿರುವ ಬೆಟ್ಟದ ಮೇಲಿನ ಗೌಲಿಶ್ ಗ್ರಾಮದ ಬಗ್ಗೆ ವಿವರಗಳನ್ನು ಒಳಗೊಂಡಿದೆ.
1825ರಲ್ಲಿ ಉತ್ಖನನ
ಹಲವು ಬೌದ್ಧಿಕ ಸಂಘಗಳ ಸದಸ್ಯರಾಗಿದ್ದ 'ಪಿಜೆ ಫೆರೆಟ್' ಎಂಬ ಸ್ಥಳೀಯ ಪುರಾತತ್ವಶಾಸ್ತ್ರಜ್ಞ (Archeologist) 1825ರ ಜನವರಿ ತಿಂಗಳಲ್ಲಿ ಗೌಲಿಶ್ ಗ್ರಾಮದಲ್ಲಿ ಉತ್ಖನನಗಳನ್ನು ಕೈಗೊಂಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶದಲ್ಲಿ ಫೆರೆಟ್ ಅನೇಕ ಸಂಶೋಧನೆಗಳನ್ನು ಮಾಡಿದ್ದರು. ಫೆರೆಟ್ ಅವರು ಆ ಕಾಲದಲ್ಲೇ ಸ್ಥಳೀಯ ಸೆಲೆಬ್ರಿಟಿ ಆಗಿದ್ದರು ಮತ್ತು ಫ್ರೆಂಚ್ ಪಟ್ಟಣದ ಪುರಸಭೆಯ ದಾಖಲೆಗಳ ಪ್ರಕಾರ ಫೆರೆಟ್ 200 ವರ್ಷಗಳ ಹಿಂದೆಯೇ ಆ ಪ್ರದೇಶದಲ್ಲಿ ಉತ್ಖನನ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಉತ್ಖನನ ಕೈಗೊಂಡಿದ್ದ ಸ್ವಯಂಸೇವಕರ ತಂಡದ ನೇತೃತ್ವ ವಹಿಸಿದ್ದ ಗುಯಿಲೌಮ್ ಬ್ಲಾಂಡೆಲ್ ಮಾತನಾಡಿ, ಮಹಿಳೆಯರು ತಮ್ಮ ಕುತ್ತಿಗೆಯಲ್ಲಿ ವಾಸನೆಯುಕ್ತ ಲವಣಗಳ ಸಣ್ಣ ಬಾಟಲಿಗಳನ್ನು ಈ ಹಿಂದೆ ಧರಿಸುತ್ತಿದ್ದರು. ಈ ಹಿಂದೆ ಇಲ್ಲಿ ಉತ್ಖನನಗಳು ನಡೆದಿವೆ ಎಂದು ನಮಗೆ ತಿಳಿದಿತ್ತು, ಆದರೆ 200 ವರ್ಷಗಳ ಹಿಂದಿನ ಸಂದೇಶವನ್ನು ಕಂಡುಹಿಡಿದಿರುವುದು ಸಂಪೂರ್ಣ ಆಶ್ಚರ್ಯಕರವಾಗಿದೆ.
ಅನೇಕ ಪುರಾತತ್ವಶಾಸ್ತ್ರಜ್ಞರು ತಮ್ಮ ಕೆಲಸ ಮುಗಿದ ನಂತರ ಬೇರೆ ಯಾರೂ ಬರುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ, ಪತ್ರವನ್ನು ಬಿಟ್ಟು ಹೋಗಲಾಗಿದೆ. ಅದು ಗೌಲಿಶ್ ಗ್ರಾಮವೆಂದು ನಮಗೆ ತಿಳಿದಿದೆ. ಈ ಊರಿನಲ್ಲಿ ಏನು ನಡೆದಿದೆಯೋ ಎಂಬುದು ನಮಗೆ ಗೊತ್ತಿಲ್ಲ. ಇದು ಅತ್ಯಂತ ಪ್ರಮುಖ ಸ್ಥಳವಾಗಿತ್ತಾ? ಎಂಬುದನ್ನು ನಾವು ಕಂಡುಹಿಡಿಯಬೇಕು ಎಂದು ಬ್ಲಾಂಡೆಲ್ ಹೇಳಿದರು. (ಏಜೆನ್ಸೀಸ್)