

ಹುಬ್ಬಳ್ಳಿ: ಸ್ವಲ್ಪ ಮೈಮರೆತರೂ ಚಾಣಾಕ್ಷತನದಿಂದ ಕಳ್ಳತನ ನಡೆಸುವ ದಂಡು ನಮ್ಮ ಸುತ್ತಮುತ್ತಲೇ ಇರುತ್ತದೆ. ಹೀಗಿರುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕಾದ್ದು ಎಲ್ಲರ ಕರ್ತವ್ಯ.
ರಾಜ್ಯದ ಹಲವೆಡೆ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದೀಗ ಹುಬ್ಬಳ್ಳಿಯ ಗಂಟಿಕೇರಿಯಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ಬಂದು ಚಿನ್ನದ ಅಂಗಡಿಯಿಂದ ಕಳ್ಳತನ ನಡೆಸಿದ ಘಟನೆ ನಡೆದಿದೆ.
ಅಕ್ಕಸಾಲಿಗನ ಅಂಗಡಿಗೆ ಮಹಿಳೆಯರು ಮತ್ತು ಮಕ್ಕಳು ಬಂದಿದ್ದಾರೆ. ಭಿಕ್ಷೆ ಬೇಡುವ ನೆಪದಲ್ಲಿ ಮಾಲೀಕನ ಗಮನ ಬೇರೆಡೆಗೆ ಸೆಳೆದಿದ್ದಾರೆ. ಈ ವೇಳೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ 200 ಗ್ರಾಂ. ಚಿನ್ನದ ಗಟ್ಟಿ ಕಳುವು ಮಾಡಿದ್ದಾರೆ.
ಭಿಕ್ಷುಕರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಗಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳತನ ನಡೆಸಿದ ಮಹಿಳೆಯರ ಪತ್ತೆಗೆ ಬಲೆ ಬೀಸಿದ್ದಾರೆ.