200 ಕೋಟಿ ರೂ. ಅಕ್ರಮ ವಹಿವಾಟಿನ ಧಮ್ಕಿ; ವೃದ್ಧನಿಂದ 7.10 ಲಕ್ಷ ಸುಲಿಗೆ

Mumbai man
Published on

ಬೆಂಗಳೂರು: ‘ನಿಮ್ಮ ಹೆಸರಿನಲ್ಲಿ ಮೊಬೈಲ್ ಸಿಮ್ ಖರೀದಿಸಿ 200 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ’ ಎಂದು ಭಯ ಹುಟ್ಟಿಸಿ, ತನಿಖೆ ನೆಪದಲ್ಲಿ ವೃದ್ಧನ ಬಳಿ 7.10 ಲಕ್ಷ ರೂ. ಸೈಬರ್ ಕಳ್ಳರು ದೋಚಿದ್ದಾರೆ.

ಬಸವನಗುಡಿ ನಿವಾಸಿ ಆರ್. ಶ್ರೀಧರ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ. 11ರಂದು ಶ್ರೀಧರ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ‘ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್ ಬಳಸಿಕೊಂಡು ಹೊಸ ಸಿಮ್‌ಕಾರ್ಡ್ ಖರೀದಿಸಿದ್ದಾರೆ. ಅದರ ಮೂಲಕ 200 ಕೋಟಿ ರೂ. ಅಕ್ರಮ ವಹಿವಾಟು ನಡೆಸಿದ್ದು, ನಿಮ್ಮ ಬ್ಯಾಂಕ್ ಖಾತೆಗೆ 20 ಕೋಟಿ ರೂ. ನೇರವಾಗಿ ಜಮೆ ಆಗಿದೆ. ಈ ಬಗ್ಗೆ ತನಿಖೆ ನಡೆಸಬೇಕಿದೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದ. ಯಾರೆಂದು ಕೇಳಿದಾಗ, ‘ಸಿಬಿಐ ಅಧಿಕಾರಿ’ ಎಂದು ಹೇಳಿ ನಂಬಿಸಿ, ‘ನಿಮ್ಮ ಬ್ಯಾಂಕ್ ಖಾತೆಗಳ ವಿವರ ಕೊಡಬೇಕು. ಇಲ್ಲವಾದರೆ, ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಹೆದರಿಸಿದ್ದ.

ಆತಂಕಗೊಂಡ ಶ್ರೀಧರ್, ಮೂರು ಬ್ಯಾಂಕ್‌ಗಳಲ್ಲಿರುವ ತನ್ನ ಖಾತೆಗಳ ವಿವರ ಕೊಟ್ಟಿದ್ದರು. ಇದಾದ ಮೇಲೆ ಮತ್ತೆ ಅಪರಿಚಿತ ವ್ಯಕ್ತಿ, ‘ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಎಲ್ಲ ಹಣವನ್ನು ಆರ್‌ಬಿಐ ಖಾತೆಗೆ ಜಮೆ ಮಾಡಬೇಕು. ಸಿಬಿಐ ತನಿಖೆ ಪೂರ್ಣಗೊಂಡ ಮೇಲೆ 3 ದಿನಗಳ ಒಳಗೆ ವಾಪಸ್ ನಿಮ್ಮ ಖಾತೆಗೆ ಜಮೆ ಆಗಲಿದೆ’ ಎಂದಿದ್ದ. ನಂಬಿದ ಶ್ರೀಧರ್ ಅವರು, ತಮ್ಮ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 2.10 ಲಕ್ಷ ರೂ. ಮತ್ತು ಬಂಧನ್ ಬ್ಯಾಂಕ್ ಮತ್ತು ಕರೂರ್ ವೈಶ್ಯ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ.ಗಳನ್ನು ಅಪರಿಚಿತ ವ್ಯಕ್ತಿ ಕೊಟ್ಟ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮಾಡಿದ್ದರು. ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತಿದಂತೆ ಸೈಬರ್ ಖದೀಮರು ಮೊಬೈಲ್ ಆ್ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದರು.

ಶ್ರೀಧರ್, ವಾಪಸ್ ಕರೆ ಮಾಡಿದಾಗ ಸಂಪರ್ಕ ಲಭ್ಯವಾಗಲಿಲ್ಲ. ಕೊನೆಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net