

ಉತ್ತರಕನ್ನಡ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ಥಿಗೆ 200 ಕೋಟಿ ರೂಪಾಯಿ ಮಂಜೂರು ಮಾಡಿಸುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ನೆರೆ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಈ ಭರವಸೆ ನೀಡಿದ್ದಾರೆ.
ಪಿಡಬ್ಲುಡಿ ಇಲಾಖೆಯಿಂದ 100 ಕೋಟಿ ರೂಪಾಯಿ ಹಾಗೂ ಆರ್‌ಡಿಪಿಆರ್ ವತಿಯಿಂದ 100 ಕೋಟಿ ರೂಪಾಯಿ ತುರ್ತು ಬಿಡುಗಡೆಗೊಳಿಸುವ ಭರವಸೆ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ಕಳೆದ ಬಾರಿಯಂತೆ 10 ಸಾವಿರ ರೂಪಾಯಿ ನೀಡುವುದಾಗಿ ಹೇಳಲಾಗಿದೆ. ಹಾಗೆಯೇ ನೆರೆಹಾನಿಗೊಳಗಾದ ಮನೆಗಳಿಗೆ ಮನೆಬಳಕೆ ವಸ್ತುಗಳ ಖರೀದಿಗೆ ತುರ್ತು ಹಣ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ನೆರೆಯಿಂದ ತೀವ್ರ ಹಾನಿಗೊಳಗಾಗಿರುವ ಕಳಚೆ ಗ್ರಾಮವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರ ಮಾಡಲು ಸೂಚಿಸಲಾಗಿದೆ. ಈ ಗ್ರಾಮದಲ್ಲಿ ತೀವ್ರ ಭೂಕುಸಿತವಾಗಿದ್ದು, ಮನೆ ನಿರ್ಮಾಣ ಸಾಧ್ಯವಿಲ್ಲದ ಹಿನ್ನಲೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಗ್ರಾಮಕ್ಕೆ ಅಗತ್ಯವಿರುವ ಸುಮಾರು 15 ಎಕರೆ ಪ್ರದೇಶವನ್ನ ಬೇರೆಡೆ ಗುರುತಿಸುವಂತೆ ಅಧಿಕಾರಿಗೆ ಹೇಳಲಾಗಿದೆ.
ಹತ್ತಾರು ಕಡೆ ಭೂಕುಸಿತವಾಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟಕ್ಕೆ 10 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಕರಾವಳಿಯ ಪ್ರತಿ ವಿಧಾನಸಭಾ ಕ್ಷೇತ್ರಗಳ ಮೀನುಗಾರರಿಗೆ 3 ಸಾವಿರ ಡೋಸೇಜ್ ವ್ಯಾಕ್ಸಿನ್ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.