

ಬೆಟ್ಟದಪುರ: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರು ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲೂ ಯಥಾವತ್ತಾಗಿ ಜಾರಿಗೊಳಿಸಿದ ಏಕೈಕ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಂದು ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಹುಟ್ಟೂರಾದ ಬೆಟ್ಟದತುಂಗ ಗ್ರಾಮದಲ್ಲಿ ಬೆಂಗಳೂರಿನ ಅರಸು ಮಹಿಳಾ ಸಂಘ ಗ್ರಾಮಸ್ಥರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಸು ಅವರಿಗೆ ಅಧಿಕಾರದ ಆಸೆ ಇರಲಿಲ್ಲ. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಜನರಿಗೆ ಸಹಾಯ ಮಾಡಬೇಕು ಎನ್ನುವ ಹಂಬಲ ಹೆಚ್ಚಾಗಿತ್ತು. ಅದಕ್ಕಾಗಿ ತಮ್ಮ ಆಡಳಿತಾವಧಿಯಲ್ಲಿ ಬಡವರ ಪರ ಧ್ವನಿಯಾಗುವ ಮೂಲಕ ಸೇವೆ ಸಲ್ಲಿಸಿದರು. ಅಲ್ಲದೆ ತಮ್ಮ ರಾಜಕೀಯ ಜೀವನದಲ್ಲಿಯೂ ಜಾತಿಬೇಧ ಮಾಡದೇ ಅತಿ ಸಣ್ಣ ಜಾತಿಯವರನ್ನು ರಾಜಕೀಯವಾಗಿ ಬೆಳಸಿ, ಮಂತ್ರಿಸ್ಥಾನ ಸಿಗುವಂತೆ ಮಾಡುವ ಮೂಲಕ ಮಾದರಿ ರಾಜಕಾರಣಿಯಾಗಿದ್ದರು ಎಂದರು.
ಅರಸು ಅವರು ಬೆಟ್ಟದತುಂಗಾ ಗ್ರಾಮದಲ್ಲಿ ಜನಿಸಿ ಸುಮಾರು ಆರು ವರ್ಷಗಳ ಕಾಲ ಇಲ್ಲಿ ಇದ್ದು, ಬಳಿಕ ಹುಣಸೂರಿನ ಕಲ್ಲಹಳ್ಳಿಯ ಅಜ್ಜಿ ಮನೆಗೆ ಹೋದರು. ಕಳೆದ 2017ರಲ್ಲಿ ಆಡಳಿತದಲ್ಲಿ ಇದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಲ್ಲಹಳ್ಳಿಯನ್ನು ದತ್ತು ತೆಗೆದುಕೊಳ್ಳುವಾಗ, ನಾನು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ, ಅರಸು ಅವರು ಬೆಟ್ಟದತುಂಗಾ ಗ್ರಾಮದಲ್ಲಿ ಜನಿಸಿದ್ದು, ನಿಜವಾದ ಹುಟ್ಟೂರು ಇದು ಎಂದು ಗಮನಕ್ಕೆ ತಂದಿದ್ದೆ. ಇದಾದ ಬಳಿಕ ಈ ಗ್ರಾಮವನ್ನು ಕೂಡ ದತ್ತು ಪಡೆದು ಸುಮಾರು 10 ಕೋಟಿ ರೂ. ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿದರು. ಮುಂಬರುವ ದಿನಗಳಲ್ಲಿ ಗ್ರಾಮದ ಮತ್ತಷ್ಟು ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಗ್ರಾಮದ ಗ್ರಾಮ ಪಂಚಾಯಿತಿ ಬಳಿ ಇರುವ ಡಿ.ದೇವರಾಜ ಅರಸು ಅವರ ಪುತ್ಥಳಿಗೆ ಸಚಿವರು ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಕ್ತಾರ ಸೂರಜ್ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಎಸ್.ಪ್ರೀತಿಲಕ್ಷ್ಮೀ, ಶಿಕ್ಷಣ ತಜ್ಞ ಟಿ.ಸಿ.ವಸಂತರಾಜೇ ಅರಸ್, ಸಾಹಿತಿ ಜೋಗನಹಳ್ಳಿ ಗುರುಮೂರ್ತಿ, ಗ್ರಾಮದ ಯಜಮಾನ ಟಿ.ಕೃಷ್ಣೇ ಅರಸು, ಅರಸು ಮಹಿಳಾ ಸಂಘದ ಅಧ್ಯಕ್ಷೆ ಸುಜಯಾಕಾಂತಾಮಣಿ, ಕಾರ್ಯಾಧ್ಯಕ್ಷೆ ವಿಜಯಲಕ್ಷ್ಮೀ ಅರಸು, ಕಾರ್ಯದರ್ಶಿ ಭವಾನಿ ಅರಸು, ಖಂಜಾಂಚಿ ಬಿ.ನಾಗಲಕ್ಷ್ಮೀ, ಮುಖಂಡರಾದ ಅನಿತಾ ತೋಟಪ್ಪ ಶೆಟ್ಟಿ, ಸರಸ್ಪತಿ, ವಿನಯ್‌ರಾಜೇ ಅರಸ್ ಇತರರು ಇದ್ದರು.