

ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯ ನಾನಾ ಕಡೆ ನಿಷೇಧಿತ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾವೋವಾದಿ) 20 ಸದಸ್ಯರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮೇ 16 ಮತ್ತು 17ರ ನಡುವೆ ವೆಂಕಟಾಪುರಂ, ವಾಜೀಡು ಮತ್ತು ಮುಲುಗು ಜಿಲ್ಲೆಯ ಕಣ್ಣೈಗುಡೆಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ, ಶೋಧ ಕಾರ್ಯಾಚರಣೆ ಮತ್ತು ಗಸ್ತಿನ ವೇಳೆ ವಿಭಾಗೀಯ ಸಮಿತಿಯ ಒಬ್ಬ ಹಾಗೂ ಪ್ರದೇಶ ಸಮಿತಿಯ ಐವರು ಸದಸ್ಯರ ಸಹಿತ 20 ನಕ್ಸಲೀಯರನ್ನು ಬಂಧಿಸಲಾಯಿತೆಂದು ಎಸ್ಪಿ ಶಬರೀಶ್ ತಿಳಿಸಿದ್ದಾರೆ. ಛತ್ತೀಸ್ಗಢ-ತೆಲಂಗಾಣ ಗಡಿ ಪ್ರದೇಶದ ಕರ್ರೆಗುಟ್ಟ ಬೆಟ್ಟಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಛತ್ತೀಸ್ಗಡ ಪೊಲೀಸರು ಈಚೆಗೆ ನಡೆಸಿದ ವ್ಯಾಪಕ ಶೋಧ ಕಾರ್ಯಾಚರಣೆಗಳ ನಂತರ, ಕರ್ರೆಗುಟ್ಟದಲ್ಲಿ ಆಶ್ರಯ ಪಡೆದಿದ್ದ ನಕ್ಸಲೀಯರು ಸಣ್ಣ ಸಣ್ಣ ಗುಂಪುಗಾಗಿ ವಿವಿಧ ಪ್ರದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆಂಬ ಮಾಹಿತಿ ಮುಲುಗು ಪೊಲೀಸರಿಗೆ ಲಭ್ಯವಾಗಿತ್ತು. ನಕ್ಸಲರು ಮುಲುಗು ಜಿಲ್ಲೆ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಕಠಿಣ ಕಣ್ಗಾವಲು ಏರ್ಪಡಿಸಿ ಹಲವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ 20 ನಕ್ಸಲೀಯರು ತೆಲಂಗಾಣ ಮತ್ತು ಛತ್ತೀಸ್ಗಢದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಕೊಲೆ ಹಾಗೂ ಪೊಲೀಸ್ ಮಾಹಿತಿದಾರರೆಂದು ಆರೋಪಿಸಿ ಜನಸಾಮಾನ್ಯರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.