ಪ್ರವಾಹದಲ್ಲಿ ಕೊಚ್ಚಿ ಹೋದ 20 ಕೆಜಿ ಚಿನ್ನಾಭರಣ: ಬೀದಿಗಿಳಿದ ಜನರು, ನಂತರ ಏನಾಯಿತು? Gold

Gold
Published on

Gold : ಕಳೆದ ಕೆಲವು ದಿನಗಳಿಂದ ಚೀನಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಾಂಕ್ಸಿ ಪ್ರಾಂತ್ಯದ ಆಭರಣ ಅಂಗಡಿಯಲ್ಲಿನ ಚಿನ್ನ ಮತ್ತು ಬೆಳ್ಳಿ ಆಭರಣಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಕಾರಣ ಅವುಗಳನ್ನು ಹುಡುಕಲು ಜನರು ಹರಸಾಹಸ ಪಡುತ್ತಿದ್ದಾರೆ. ಶಾಂಕ್ಸಿ ಪ್ರಾಂತ್ಯದ ವುಕ್ಸಿ ಕೌಂಟಿಯಲ್ಲಿ ನಡೆದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕರಾವಳಿಗೆ ಹತ್ತಿರವಿರುವ ಶಾಂಕ್ಸಿ ಪ್ರದೇಶವು ಭಾರೀ ಮಳೆಯಿಂದಾಗಿ ಜಲಾವೃತವಾಗಿತ್ತು. ಜುಲೈ 25ರ ಬೆಳಗ್ಗೆ ಚಿನ್ನಾಭರಣ ಅಂಗಡಿ ಎಂದಿನಂತೆ ತೆರೆದಿತ್ತು. ಈ ವೇಳೆ ಪ್ರವಾಹದ ನೀರು ಅಂಗಡಿಯೊಳಗೆ ನುಗ್ಗಿತು. ಪರಿಣಾಮವಾಗಿ, ಅಂಗಡಿಯಲ್ಲಿನ ಆಭರಣಗಳು ಕೊಚ್ಚಿ ಹೋಗಿವೆ. ಮರುಬಳಕೆಯ ಚಿನ್ನದ ಜೊತೆಗೆ ಸೇಫ್ ಬಾಕ್ಸ್‌ನಲ್ಲಿ ಬಹಳಷ್ಟು ನಗದು ಸಹ ಇತ್ತು ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ. ಸುಮಾರು 20 ಕೆಜಿ ಚಿನ್ನ ಮತ್ತು ಬೆಳ್ಳಿ ನಷ್ಟವಾಗಿದೆ. ಒಟ್ಟು ನಷ್ಟ 10 ಮಿಲಿಯನ್ ಯುವಾನ್ (ರೂ. 12 ಕೋಟಿ) ಎಂದು ಅಂದಾಜಿಸಲಾಗಿದೆ.

ಕಾಣೆಯಾದ ವಸ್ತುಗಳಲ್ಲಿ ಚಿನ್ನದ ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ಪೆಂಡೆಂಟ್‌ಗಳು, ವಜ್ರದ ಉಂಗುರಗಳು, ಜೇಡ್ ತುಂಡುಗಳು ಮತ್ತು ಬೆಳ್ಳಿ ಆಭರಣಗಳು ಸೇರಿವೆ ಎಂದು ವರದಿಯಾಗಿದೆ. ಹೊಸ ದಾಸ್ತಾನು, ಮರುಬಳಕೆಯ ಚಿನ್ನ ಮತ್ತು ದೊಡ್ಡ ಪ್ರಮಾಣದ ನಗದು ಇದ್ದ ಅಂಗಡಿಯ ತಿಜೋರಿಯೂ ಸಹ ಪ್ರವಾಹದಲ್ಲಿ ಕಾಣೆಯಾಗಿದೆ.

ಪ್ರವಾಹದ ನೀರಿನಲ್ಲಿ ಚಿನ್ನ ಕೊಚ್ಚಿ ಹೋಗಿದೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಚಿನ್ನವನ್ನು ಹುಡುಕಲು ಪ್ರಾರಂಭಿಸಿದರು. ಆಭರಣಗಳನ್ನು ಹುಡುಕಲು ಲೋಹ ಶೋಧಕಗಳನ್ನು ಬಳಸುತ್ತಿದ್ದಾರೆ. ಇಲ್ಲಿಯವರೆಗೆ, ಕೇವಲ 1 ಕೆಜಿ ಚಿನ್ನವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಕೆಲವರು ಸ್ವಯಂಪ್ರೇರಣೆಯಿಂದ ಅದನ್ನು ಹಿಂದಿರುಗಿಸಿದ್ದಾರೆ. ಆದರೆ, ಹೆಚ್ಚಿನ ಮಂದಿ ಹಿಂತಿರುಗಿಸಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಚಿನ್ನ ಕದ್ದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲೀಕರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net