

ಭೋಪಾಲ್ : (boy falls into pot of boiling oil) ಅಣ್ಣನ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ 2 ವರ್ಷದ ಬಾಲಕ ಕೊತ ಕೊತ ಕುದಿಯುತ್ತಿರುವ ಎಣ್ಣೆ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಮುದ್ದಾದ ಮಗುವನ್ನು ಕಳೆದುಕೊಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಹೃದಯ ವಿದ್ರಾವಕ ಪ್ರಕರಣ ಭೋಪಾಲ್‌ನಲ್ಲಿ ನಡೆದಿದೆ.
ಭೋಪಾಲ್‌ನ ನಿಶಾತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವನಗರದ ನಿವಾಸಿ ರಾಜೇಶ್ ಸಾಹು ಅವರು ತಮ್ಮ ಕಿರಿಯ ಸಹೋದರನ ನಿಶ್ಚಿತಾರ್ಥವನ್ನು ಜನವರಿ 20 ರಂದು ನಡೆಸುತ್ತಿದ್ದರು. ರಾಜೇಶ್ ತನ್ನ ಪತ್ನಿ ಹಾಗೂ 7 ಮತ್ತು 2 ವರ್ಷದ ಪುತ್ರರೊಂದಿಗೆ ಕಾರ್ಯಕ್ರಮಕ್ಕೆ ತೆರಳಿದ್ದರು.
ಸಂಸ್ಕಾರ್ ಗಾರ್ಡನ್‌ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭ ಮುಗಿದ ನಂತರ ಕುಟುಂಬ ಸದಸ್ಯರೆಲ್ಲರೂ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ 2 ವರ್ಷದ ಮಗು ಅಕ್ಷಯ್ ಆಟವಾಡುತ್ತಾ ಬಿಸಿ ಎಣ್ಣೆಯ ಬಾಣಲೆಯ ಬಳಿ ಬಂದಿರುವುದನ್ನು ತಂದೆ ನೋಡಿದ್ದಾರೆ. ಅವನನ್ನು ತಡೆಯುವ ಮೊದಲೇ ಅವನು ಬಾಣಲೆಗೆ ಬಿದ್ದನು.
ಕುಟುಂಬದವರು ಅವರನ್ನು ಬನ್ಸಾಲ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಸಮಯದಲ್ಲಿ, ಅಕ್ಷಯ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ. ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಮುಗ್ಧ ಮಗುವಿನ ಸಾವಿನ ನಂತರ ನಿಶ್ಚಿತಾರ್ಥದ ಖುಷಿಯ ಸಂಭ್ರಮದಲ್ಲಿದ್ದ ಕಡೆ ಈಗ ಶೋಕ ಮಡುಗಟ್ಟಿದೆ.