

ಬೆಂಗಳೂರು:ರಾಜ್ಯ ಸರ್ಕಾರದ ಆದೇಶದಂತೆ 2008ರಿಂದ 2013ರ ಅವಧಿಯಲ್ಲಿ ತತ್ಕಾಲ್ ಸೇವೆಗಳಡಿ ಹೆಚ್ಚುವರಿ ಸೇವೆ ಸಲ್ಲಿಸಿರುವ ರಾಜ್ಯ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಅನುಮತಿ ಪಡೆದ ಭೂ ಮಾಪಕರಿಗೆ ಮುಂದಿನ ಮೂರು ತಿಂಗಳಲ್ಲಿ ಸಂಭಾವನೆ ಪಾವತಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೆ, ಸಂಭಾವನೆ ಪಾವತಿ ಮಾಡುವ ಪ್ರಕ್ರಿಯೆ ವಿಳಂಬವಾದಲ್ಲಿ ಶೇ.1 ಬಡ್ಡಿಯೊಂದಿಗೆ ಪಾವತಿ ಮಾಡಬೇಕು. ಈ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಸರ್ಕಾರದಿಂದ ಪರವಾನಗಿ ಪಡೆದ ಭೂಮಾಪಕ ಕೆ.ಬಿ.ಲೋಕೇಶ್ ಸೇರಿ 1,130 ಮಂದಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ರಾಮಚಂದ್ರ ಹುದ್ದಾರ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮೇಲ್ಮನವಿದಾರರ ಪರ ವಕೀಲರು, ಮೇಲ್ಮನವಿ ಸಲ್ಲಿಸಿರುವವರು 2008ರ ಆದೇಶದ ಪ್ರಯೋಜನವನ್ನು 2013ರಲ್ಲಿ ನಿಯಮಗಳ ತಿದ್ದುಪಡಿ ಮಾಡುವವರೆಗೂ ಹೆಚ್ಚುವರು ಶುಲ್ಕ ಪಡೆಯಲು ಅರ್ಹರಾಗಿರುತ್ತಾರೆ. 2008ರ ಆದೇಶದ ಪ್ರಕಾರ ಸರ್ಕಾರವು ಈ ಮೇಲ್ಮನವಿದಾರರಿಂದ ಮಾಡಬೇಕಾದ ಕೆಲಸವನ್ನು ಮಾಡಿಸಿಕೊಂಡಿದ್ದು, ಸಂಭಾವನೆ ಪಾವತಿಸಿಲ್ಲ ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಆದೇಶದ ಅವಧಿಯಲ್ಲಿ ಅರ್ಜಿ ಸಲ್ಲಿಸಿರುವ ಭೂ ಮಾಪಕರು ಸೇವೆ ಸಲ್ಲಿಸಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಸಂಭಾವನೆ ಪಾವತಿಸಬೇಕು ಎಂದು ಸೂಚಿಸಿದೆ. ಜತೆಗೆ ತತ್ಕಾಲ್‌ನಲ್ಲಿ ಸೇವೆ ಪಡೆದುಕೊಂಡ ಫಲಾನುಭವಿಗಳಿಂದ ಸಂಗ್ರಹಿಸಿರುವ ಮೊತ್ತವನ್ನು ಪರವಾನಗಿ ಪಡೆದ ಭೂ ಮಾಪಕರಿಗೆ ಹಾಗೂ ಸರ್ಕಾರದ ಖಜಾನೆಗೆ ಪಾವತಿಸದೆ ಪ್ರತ್ಯೇಕ ಖಾತೆಯಲ್ಲಿಡಲಾಗಿದೆ. ಸೇವೆ ಸಲ್ಲಿಸಿದ ಭೂ ಮಾಪಕರಿಗೆ ಸಂಭಾವನೆ ಪಾವತಿಸದಿರುವುದು ಸರ್ಕಾರದ ಅನ್ಯಾಯದ ನಡೆಯಾಗಿದೆ ಎಂದು ಪೀಠ ಹೇಳಿದೆ.
ಹೆಚ್ಚುವರಿ ಕೆಲಸ ಮಾಡಿಕೊಂಡಿರುವ ಸರ್ಕಾರ ಅದಕ್ಕೆ ಸಂಭಾವನೆ ನೀಡದಿರುವುದು ಸರಿಯಾದ ಕ್ರಮವಲ್ಲ. ಸೇವಕರ ರಕ್ತ ಮತ್ತು ಬೆವರಿಗೆ ಬೆಲೆ ನೀಡಬೇಕಾಗಿದೆ ಎಂದು ತಿಳಿಸಿದೆ.
ಪ್ರಕರಣವೇನು?
ರಾಜ್ಯ ಸರ್ಕಾರ ರೈತರ ತುರ್ತು ನೆರವಿಗಾಗಿ ತತ್ಕಾಲ್ ಪೋಡಿ ಕಾಮಗಾರಿಗಿದ್ದ ಶುಲ್ಕ 500 ರೂ.ಗಳನ್ನು ಮತ್ತು ಪೂರ್ವಭಾವಿ ಸ್ಕೆಚ್‌ಗೆ ಈ ಹಿಂದೆ ಇದ್ದಂತಹ 430 ರೂ.ಗಳನ್ನು 600 ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿತ್ತು. ಈ ಆದೇಶದಂತೆ 2008ರಿಂದ 2013ರವರೆಗೂ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಭೂ ಮಾಪಕರಿಗೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿತ್ತು. ಆದರೆ, ಸರ್ಕಾರ ಪಾವತಿಸಿರಲಿಲ್ಲ.
ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯಪೀಠ, ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.