ಕೆಬಿಸಿ ತಂಡದ ಸದಸ್ಯರಿಗೆ ಕರೊನಾ; ಆತಂಕದಲ್ಲಿ ಬಿಗ್​ ಬಿ ಅಮಿತಾಬ್​

Ami
Published on

ಮುಂಬೈ: ಕರೊನಾದಿಂದಾಗಿ 25ಕ್ಕೂ ಹೆಚ್ಚು ದಿನಗಳನ್ನು ನಾನಾವತಿ ಆಸ್ಪತ್ರೆಯಲ್ಲಿ ಕಳೆದಿರುವ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​, ಇತ್ತೀಚೆಗಷ್ಟೇ ಗುಣಮುಖರಾಗಿ ಬಂದಿದ್ದಾರೆ. ಅಷ್ಟೇ ಅಲ್ಲ ಹೋಮ್​ ಕ್ವಾರಂಟೈನ್​ ಮುಗಿಸಿ ಕೌನ್​ ಬನೇಗಾ ಕ್ರೋರ್​ಪತಿ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಇದೀಗ ಮತ್ತೆ ಅಮಿತಾಬ್​ಗೆ ಕರೊನಾ ಕಂಟಕ ಎದುರಾಗಿದೆ!

ಇತ್ತೀಚಿನ ಕೆಲ ದಿನಗಳಿಂದ ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಈ ನಡುವೆ ಸಿನಿಮಾ ಮತ್ತು ಸಿರೀಯಲ್​ ಚಿತ್ರೀಕರಣಗಳಿಗೂ ಚಾಲನೆ ನೀಡಲಾಗಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡೇ ಮುಂದುವರಿಯುವಂತೆ ಸೂಚನೆ ನೀಡಲಾಗಿದೆ. ಇದೆಲ್ಲದರ ನಡುವೆಯೇ ಅಮಿತಾಬ್​ ಬಚ್ಚನ್​ ಪಾಲ್ಗೊಂಡಿರುವ ಕೆಬಿಸಿ ಶೂಟಿಂಗ್​ನಲ್ಲಿನ ಕೆಲ ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.

ಸದ್ಯ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ಈಗಾಗಲೇ ಅದರಿಂದ ಗುಣಮುಖವಾಗಿ ಬಂದಿರುವ ಅಮಿತಾಬ್​ ಅವರಿಗೂ ಏನಾದರೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಸೆಟ್​ನ ಇಬ್ಬರಿಗೆ ಕರೊನಾ ಇರುವುದು ದೃಢಪಟ್ಟಿದ್ದು, ಇನ್ನುಳಿದವರ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.

ಇತ್ತ ಮಲೈಕಾ ಅರೋರಾ ತೀರ್ಪುಗಾರರಾಗಿ ನಡೆಸಿಕೊಡುವ ಕಾರ್ಯಕ್ರಮ ಬೆಸ್ಟ್ ಡಾನ್ಸರ್​ ಶೋದ ಏಳೆಂಟು ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಸದ್ಯ ಹಾಗೇ ಪಾಸಿಟಿವ್​ ವರದಿ ಬಂದ ಸಿಬ್ಬಂದಿಯನ್ನು ಹೋಮ್​ ಕ್ವಾರಂಟೈನ್​ ಮಾಡಲಾಗಿದ್ದು, ಇನ್ನುಳಿದವರೂ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net