

ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತಾ ಇಲಾಖೆಯು ಅಮೆರಿಕ ಸರ್ಕಾರದ ವೆಚ್ಚವನ್ನು ಸುಗಮಗೊಳಿಸಲು ಸುಮಾರು 2 ಲಕ್ಷ ಕ್ರೆಡಿಟ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿದೆ. ಈಗಾಗಲೇ ಉದ್ಯೋಗಿ ಗಳ ಕಡಿತ ಮುಂತಾದವುಗಳ ಮೂಲಕ ಆಡಳಿತ ವೆಚ್ಚ ತಗ್ಗಿಸಲು ಮುಂದಾಗಿರುವ ಅಮೆರಿಕ ಸರ್ಕಾರ, ಈ ಮೂಲಕ ಇನ್ನೊಂದು ಹಂತದ ಖರ್ಚು ಕಡಿತಕ್ಕೆ ಅಣಿಯಾಗಿದೆ.
ಸರ್ಕಾರಿ ವೆಚ್ಚ ಕಡಿಮೆ ಮಾಡಲು ಮತ್ತು ಖರ್ಚುಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಸಲುವಾಗಿ ಸರ್ಕಾರಿ ಕ್ರೆಡಿಟ್ ಕಾರ್ಡ್ಗಳನ್ನು ಸರಳೀಕರಿಸಲು ಕೆಲಸ ಮಾಡಲಾಗುತ್ತಿದೆ ಎಂದು ಸರ್ಕಾರಿ ದಕ್ಷತಾ ಇಲಾಖೆ ಇತ್ತೀಚೆಗೆ ತಿಳಿಸಿತ್ತು. ಇದರ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ವೆಚ್ಚವನ್ನು ಮರು ರೂಪಿಸುವ ಆದೇಶಕ್ಕೆ ಸಹಿ ಹಾಕಿ, ಉದ್ಯೋಗಿಗಳ ಕ್ರೆಡಿಟ್ ಕಾರ್ಡ್ಗಳನ್ನು 30 ದಿನ ಫ್ರೀಜ್ ಮಾಡಲಾಗಿದೆ.
ಪ್ರಸ್ತುತ ಅಮೆರಿಕದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 46 ಲಕ್ಷ ಸಕ್ರಿಯ ಕ್ರೆಡಿಟ್ ಕಾರ್ಡ್ಗಳಿದ್ದು, 16 ಇಲಾಖೆಗಳಲ್ಲಿ 3 ವಾರಗಳ ಲೆಕ್ಕಪರಿಶೋಧನೆಗಾಗಿ 2,04,801 ಲಕ್ಷ ಕ್ರೆಡಿಟ್ ಕಾರ್ಡ್ಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಇದರಲ್ಲಿ 1,71,120 ಟ್ರಾವೆಲ್ ಕಾರ್ಡ್ ಗಳಿದ್ದರೆ, 33,681 ಪರ್ಚೇಸ್ ಕಾರ್ಡ್ಗಳಿವೆ ಎಂದು ಸರ್ಕಾರಿ ದಕ್ಷತಾ ಇಲಾಖೆ ತಿಳಿಸಿದೆ.
ಉದ್ಯೋಗಿಗಳಿಗೆ ಬಳಕೆ ಕಡ್ಡಾಯ: ಸರ್ಕಾರಿ ಕ್ರೆಡಿಟ್ ಕಾರ್ಡ್ಗಳ ಮೂಲಕ 2024ರ ಆರ್ಥಿಕ ವರ್ಷದಲ್ಲಿ ಒಟ್ಟು 3.48 ಲಕ್ಷ ಕೋಟಿ ರೂ. (40 ಬಿಲಿಯನ್ ಡಾಲರ್) ಖರ್ಚು ಮಾಡಲಾಗಿದೆ. ಸಾಮಾನ್ಯವಾಗಿ ಈ ಕ್ರೆಡಿಟ್ ಕಾರ್ಡ್ಗಳನ್ನು ಕಾನೂನು ಶುಲ್ಕ ನೀಡಲು, ಇಂಧನ ಭರ್ತಿ ಮತ್ತು ಸರ್ಕಾರಿ ಕಚೇರಿಗಳ ಖರ್ಚು-ವೆಚ್ಚಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸರ್ಕಾರಿ ಕಾರ್ಯಗಳಿಗೆ ಉದ್ಯೋಗಿಗಳು ಇದೇ ಕಾರ್ಡ್ಗಳನ್ನು ಬಳಸಬೇಕು, ಸ್ವಂತ ಕಾರ್ಡ್ಗಳನ್ನು ಬಳಸುವಂತಿಲ್ಲ.
ತಪ್ಪೆಸಗಿದ ಎಲಾನ್ ಮಸ್ಕ್ ಉಪಾಧ್ಯಕ್ಷ ವ್ಯಾನ್ಸ್ ಆರೋಪ: ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸುವ ವಿಚಾರವಾಗಿ ಎಲಾನ್ ಮಸ್ಕ್ ಕೆಲವೊಂದು ತಪು್ಪ ಎಸಗಿದ್ದಾರೆ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಹಲವು ಒಳ್ಳೆಯ ಉದ್ಯೋಗಿಗಳಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗಿಗಳ ಉತ್ತಮ ಕೆಲಸವನ್ನು ಪರಿಗಣಿಸಿ ಉದ್ಯೋಗಿಗಳ ವಜಾ ಪ್ರಕ್ರಿಯೆ ನಡೆಸಬೇಕು ಎಂದು ತಿಳಿಸಿದ್ದರು.
ಕಾರ್ಯನಿರ್ವಹಣೆ ಮೇಲೆ ಪರಿಣಾಮ?: ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹಲವು ತಿಂಗಳಿಂದ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಇಲಾಖೆಗಳಲ್ಲಿ ಉದ್ಯೋಗ ಕಡಿತವನ್ನೂ ಮಾಡಲಾಗಿದೆ. ಈಗ ಕ್ರೆಡಿಟ್ ಕಾರ್ಡ್ ನಿಷ್ಕ್ರಿಯ ನಿರ್ಧಾರದಿಂದ ವಿಪತ್ತು ಪರಿಹಾರ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಇತರೆ ಏಜೆನ್ಸಿಗಳಲ್ಲಿರುವ ಉದ್ಯೋಗಿಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಈ ನಿರ್ಧಾರದಿಂದ ಇತರೆ ಏಜೆನ್ಸಿಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರಿ ಉದ್ಯೋಗಿಗಳ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಕ್ರೆಡಿಟ್ ಕಾರ್ಡ್ಗಳು ಬಳಕೆಯಲ್ಲಿವೆ. ಈ ಕಾರ್ಡ್ಗಳ ಮಿತಿ 10 ಸಾವಿರ ಡಾಲರ್ ಇದೆ.
| ಎಲಾನ್ ಮಸ್ಕ್ ಅಮೆರಿಕ ಸರ್ಕಾರಿ ದಕ್ಷತಾ ಇಲಾಖೆ ಮುಖ್ಯಸ್ಥ