2 ಕೋಟಿ ದಾಟಿದ ಸೋಂಕಿತರು; 43 ದಿನಗಳಲ್ಲಿ 1 ಕೋಟಿ ಪ್ರಕರಣ, ವಿಶ್ವದಲ್ಲಿ ಮೃತರ ಸಂಖ್ಯೆ 7.35 ಲಕ್ಷ

nation 1
Published on

ನವದೆಹಲಿ: ಜಾಗತಿಕವಾಗಿ ಕರೊನಾ ಸೋಂಕಿತರ ಸಂಖ್ಯೆ 2 ಕೋಟಿ ದಾಟಿದೆ. 2019ರ ಡಿಸೆಂಬರ್​ನಲ್ಲಿ ಚೀನಾದಲ್ಲಿ ಪತ್ತೆಯಾದ ಸೋಂಕು 2020ರ ಜೂನ್ 27ರಂದು 1 ಕೋಟಿಯ ಗಡಿ ದಾಟಿತ್ತು. ಅದಾಗಲೇ ವಿಶ್ವದ ಬಹುತೇಕ ದೇಶಗಳಿಗೆ ಸೋಂಕು ಹರಡಿದ್ದು, ಕೇವಲ 43 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಕರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ 52 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಮೊದಲ ಸ್ಥಾನ, 30.35 ಲಕ್ಷ ಸೋಂಕಿತರೊಂದಿಗೆ ಬ್ರೆಜಿಲ್ ಎರಡನೇ ಸ್ಥಾನ ಮತ್ತು 22.26 ಲಕ್ಷ ಪ್ರಕರಣಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿವೆ. ಪ್ರತಿದಿನ ಸರಾಸರಿ 2ಲಕ್ಷದಿಂದ 2.50 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ಒಟ್ಟಾರೆಯಾಗಿ 7.35 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ಭಾನುವಾರ 62 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗಿವೆ. 1,000ಕ್ಕೂ ಅಧಿಕ ಜನರು ಮೃತರಾಗಿದ್ದಾರೆ. ಪ್ರತಿದಿನ ಸೋಂಕಿತನ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿದೆ. ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 61.62 ಪಾಲನ್ನು ಐದು ರಾಜ್ಯಗಳು ಪಡೆದುಕೊಂಡಿವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳು ಇವಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ 6.35 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಅದರಲ್ಲಿ ಮಹಾರಾಷ್ಟ್ರದಲ್ಲಿ 1.47 ಲಕ್ಷ, ಕರ್ನಾಟಕದಲ್ಲಿ 81 ಸಾವಿರ, ಆಂಧ್ರ ಪ್ರದೇಶದಲ್ಲಿ 87 ಸಾವಿರ, ತಮಿಳುನಾಡಿನಲ್ಲಿ 53 ಸಾವಿರ, ತೆಲಂಗಾಣದಲ್ಲಿ 22,500 ಪ್ರಕರಣಗಳು ಕಾಣಿಸಿ ಕೊಂಡಿವೆ. ಉಳಿದ ಬೇರೆಲ್ಲ ರಾಜ್ಯಗಳಲ್ಲಿ 10 ಸಾವಿರದ ಆಸು ಪಾಸು ಮತ್ತು ಅದಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.

ಲಾಕ್​ಡೌನ್​ನಿಂದ ಪ್ರಯೋಜನವಿಲ್ಲ: ದೇಶದ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಘೋಷಿಸಿ ಮತ್ತು ಕಂಟೇನ್ಮೆಂಟ್ ವಲಯ ನಿರ್ವಿುಸಿರುವುದರಿಂದ ಗಮನಾರ್ಹವಾದ ಪ್ರಯೋಜನ ಕಂಡುಬಂದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ಮಧ್ಯಪ್ರದೇಶ, ಜಾರ್ಖಂಡ, ತ್ರಿಪುರಾ, ರಾಜಸ್ಥಾನ, ಪಂಜಾಬ್ ಮತ್ತು ಚಂಡೀಗಢದಲ್ಲಿ ಅನ್​ಲಾಕ್ ಆರಂಭಿಸಿದ ನಂತರ ಕರೊನಾ ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿ ಪಸರಿಸಿದೆ. ಈ ಎಲ್ಲ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ (ಪಾಸಿಟಿವಿಟಿ ರೇಟ್) ಮತ್ತು ಸೋಂಕು ದ್ವಿಗುಣಗೊಳ್ಳುವ ಅವಧಿಯೂ ಹೆಚ್ಚಾಗಿದೆ. ಲಾಕ್​ಡೌನ್​ನಿಂದ ಸೋಂಕಿನ ಪಸರಿಸುವಿಕೆಯ ವೇಗವನ್ನು ನಿಧಾನಿಸಬಹುದೇ ಹೊರತು ಸೋಂಕನ್ನು ನಿವಾರಿಸಲು ಆಗುವುದಿಲ್ಲ. ಹಾಗೆಯೇ ಸೋಂಕು ಹರಡದೆ ಇರುವುದು ಕಷ್ಟವಾದುದು ಎಂದು ಆರೋಗ್ಯ ತಜ್ಞ ಜಾಮ್ಮಿ ಎಸ್. ರಾವ್ ತಿಳಿಸಿದ್ದಾರೆ.

ಮಂದಿಗೆ ಕ್ವಾರಂಟೈನ್: ಕೇರಳದ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದ ಬಳಿಕ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ನಿವಾಸಿಗಳು ಹಾಗೂ ಮಲಪ್ಪುರಂನ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಸೇರಿ ಸುಮಾರು 600 ಮಂದಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಕರೊನಾ ಪಸರಿಸುವಿಕೆ ಭೀತಿಯಿಂದಾಗಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಸ್ಥಳೀಯರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ವಿಮಾನ ನಿಲ್ದಾಣದ ಸಮೀಪದ ಪ್ರದೇಶ ಕಂಟೇನ್ಮೆಂಟ್ ವಲಯ ಆಗಿದ್ದರೂ ಸ್ಥಳೀಯ ನಿವಾಸಿಗಳು ಅಪಘಾತಕ್ಕೀಡಾದ ವಿಮಾನ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮಕ್ಕಳು ಸೇರಿದಂತೆ ಹಲವರ ಜೀವ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಈ ವರ್ಷಾಂತ್ಯಕ್ಕೆ ಕರೊನಾ ಔಷಧ ಸಿದ್ಧ: ಕರೊನಾ ಸೋಂಕಿಗೆ ತಯಾರಿಸಿರುವ ಔಷಧವು ಈ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ ಎಂದು ಸೇರಂ ಇನ್​ಸ್ಟಿಟ್ಯೂಟ್​ನ ಮುಖ್ಯಸ್ಥ ಅದಾರ್ ಪೂನಾವಾಲಾ ತಿಳಿಸಿದ್ದಾರೆ. ಔಷಧದ ಮಾರುಕಟ್ಟೆ ಬೆಲೆಯನ್ನು ಇನ್ನು ಎರಡು ತಿಂಗಳೊಳಗಾಗಿ ಪ್ರಕಟಿಸುವುದಾಗಿ ತಿಳಿಸಲಾಗಿದೆ. ಐಸಿಎಂಆರ್ ಜತೆಯಾಗಿ ದೇಶದ ಸಾವಿರಾರು ಜನರ ಮೇಲೆ ಔಷಧ ಪ್ರಯೋಗ ಮಾಡಲಾಗುವುದು. ಆಗಸ್ಟ್ ತಿಂಗಳ ಅಂತ್ಯದೊಳಗೆ ಪುಣೆ ಮತ್ತು ಮುಂಬೈನಲ್ಲಿ 4ರಿಂದ 5 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net