

South Korea Plane Crash: ಇತ್ತೀಚೆಗಷ್ಟೇ ಸಂಭವಿಸಿದ ಭೀಕರ ಕಜಕಿಸ್ತಾನ್ ವಿಮಾನ ಪತನ ಘಟನೆಯ ಬೆನ್ನಲ್ಲೇ ಡಿ.29ರಂದು ದಕ್ಷಿಣ ಕೊರಿಯಾದಲ್ಲಿ ಉಂಟಾದ ವಿಮಾನ ಪತನ ಅಕ್ಷರಶಃ ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಫ್ಲೈಟ್ನ 179 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದು, ಇಬ್ಬರು ಮಾತ್ರ ಪವಾಡದಂತೆ ಬದುಕುಳಿದರು. 181 ಪ್ರಯಾಣಿಕರ ಪೈಕಿ ಇಬ್ಬರು ಪ್ರಾಣಪಾಯದಿಂದ ಬಚಾವ್ ಆಗಿರುವುದು ಸದ್ಯ ಹಲವರ ಅನುಮಾನಕ್ಕೆ ಕಾರಣವಾಗಿದೆ.
ಬೋಯಿಂಗ್ 737-800 ಸಂಖ್ಯೆಯ ವಿಮಾನವು ರನ್ವೇಯಿಂದ ಸ್ಕಿಡ್ ಆಗಿ ವೇಗವಾಗಿ ಗಾರ್ಡ್ರೈಲ್ಗೆ ಅಪ್ಪಳಿಸಿದ ಹಿನ್ನಲೆ ವಿಮಾನ ಸ್ಫೋಟಗೊಂಡು, ಸುಟ್ಟು ಕರಕಲಾಯಿತು. ವಿಮಾನ ಪತನಗೊಂಡ ಭಯಂಕರ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರು 179 ಪ್ರಯಾಣಿಕರು ವಿಮಾನ ಸ್ಫೋಟಗೊಳ್ಳುತ್ತಿದ್ದಂತೆ ಮೃತಪಟ್ಟರೆ, ಈ ಇಬ್ಬರು ವಿಮಾನ ಸಿಬ್ಬಂದಿಗಳು ಮಾತ್ರ ಹೇಗೆ ಪ್ರಾಣಪಾಯದಿಂದ ಪಾರಾದರು ಎಂಬ ಪ್ರಶ್ನೆಗಳು ಭಾರೀ ಚರ್ಚೆಗೆ ಗ್ರಾಸವಾಯಿತು. ಅಂತಿಮವಾಗಿ ಈ ಗೊಂದಲ, ಅನುಮಾನಗಳಿಗೆ 2015ರ ಟೈಮ್ ಮ್ಯಾಗಜೀನ್ ವರದಿ ಸ್ಪಷ್ಟ ವಿವರಣೆ ಮೂಲಕ ಉತ್ತರಿಸಿದೆ.
'ಟೈಮ್ ಮ್ಯಾಗಜೀನ್ನ' 2015ರ ಅಧ್ಯಯನವು ವಿವರಿಸಿರುವ ಪ್ರಕಾರ, ದುರಂತ ಸಂಭವಿಸುವ ಸಂದರ್ಭದಲ್ಲಿ ವಿಮಾನದ ಹಿಂಭಾಗದ ಆಸನಗಳು ಅತ್ಯಂತ ಸುರಕ್ಷಿತವಾಗಿದೆ. ಮಧ್ಯಮ ಮೂರನೇ (ಶೇ. 39) ಮತ್ತು ಮುಂಭಾಗ ಆಸನಗಳಿಗೆ (ಶೇ. 38) ಹೋಲಿಸಿದರೆ, ವಿಮಾನದ ಹಿಂಭಾಗದ ಸೀಟುಗಳು ಶೇ.32ರಷ್ಟು ಸಾವಿನ ಪ್ರಮಾಣವನ್ನು ಹೊಂದಿವೆ ಎಂದು ತಿಳಿಸಿದೆ. ದುರಂತದಲ್ಲಿ ಸಾವಿನ ದವಡೆಯಿಂದ ಬಚಾವ್ ಆದವರನ್ನು ಲೀ (32) ಮತ್ತು ಕ್ವಾನ್ (25) ಎಂದು ಗುರುತಿಸಲಾಗಿದ್ದು, ಬೆಂಕಿಗೆ ಆಹುತಿಯಾದ ವಿಮಾನದ ಟೇಲ್ ಭಾಗದಿಂದ ಇವರಿಬ್ಬರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.
ದುರಂತದಲ್ಲಿ ಪವಾಡದಂತೆ ಬದುಕುಳಿದ ಇಬ್ಬರು ವಿಮಾನ ಸಿಬ್ಬಂದಿಗಳು ಗಂಭೀರ ಗಾಯಗೊಂಡಿದ್ದು, ನೆತ್ತಿಯ ಸೀಳುವಿಕೆ, ಪಾದದ ಮುರಿತ ಮತ್ತು ಕಿಬ್ಬೊಟ್ಟೆಯ ನೋವಿನಿಂದ ಕ್ವಾನ್ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಪ್ರಜ್ಞೆ ಹಿಂಪಡೆದ ಕ್ವಾನ್ರನ್ನು ಘಟನೆ ಬಗ್ಗೆ ಕೇಳಿದಾಗ, ಆತ ನನಗೆ ಅಪಘಾತ ಹೇಗಾಯಿತು ಎಂಬುದೇ ನೆನಪಿಲ್ಲ. ಯಾವುದು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ,(ಏಜೆನ್ಸೀಸ್).