2 ಇಲಾಖೆ ವರ್ಗಾವಣೆಗೆ ಕೌನ್ಸೆಲಿಂಗ್

vida
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಕಚೇರಿ ವ್ಯವಸ್ಥೆಯ ಅಮೂಲಾಗ್ರ ಸುಧಾರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಪ್ರಥಮ ಹೆಜ್ಜೆಯಾಗಿ ಪ್ರಮುಖ ಹುದ್ದೆಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ತೀರ್ವನಿಸಿದೆ. ಅದರನ್ವಯ ಉಪ ನೋಂದಣಾಧಿಕಾರಿಗಳು, ಹಿರಿಯ ನೋಂದಣಾಧಿ ಕಾರಿಗಳು ಮತ್ತು ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುವ ತೀರ್ಮಾನ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಹೊರಬಿದ್ದಿದೆ. ‘ಪ್ರಭಾವಿ’ ಸಬ್​ರಿಜಿಸ್ಟ್ರಾರ್ ವ್ಯವಸ್ಥೆ ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿರುವ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿತ್ತು. ಅದರಲ್ಲೂ ‘ಸ್ಥಳ ನಿಯುಕ್ತಿ’ ವಿಚಾರವಾಗಿ ನಡೆಯುತ್ತಿದ್ದ ಬೆಳವಣಿಗೆಗಳು ಭಾರಿ ಸದ್ದು ಮಾಡಿತ್ತು.

ರಾಜ್ಯದಲ್ಲಿ ಒಟ್ಟು 257 ಉಪ ನೋಂದಣಾಧಿಕಾರಿಗಳ ಕಚೇರಿಗಳಿವೆ, ಅವುಗಳಲ್ಲಿ 51 ಕಚೇರಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿವೆ. ಅಂದರೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಮ್​ರ್ಡಿಎ) ವ್ಯಾಪ್ತಿಯಲ್ಲಿವೆ.

ಜತೆಗೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಈ ಕಚೇರಿಗಳಲ್ಲಿ ಸೇವೆ ಸಲ್ಲಿಸುವ ಉಪ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಕೇಂದ್ರ ಕಚೇರಿ ಸಹಾಯಕರು ಮತ್ತು ಪ್ರಥಮ ದರ್ಜೆ ಸಹಾಯಕರುಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲು ಉದ್ದೇಶಿಸಲಾಗಿದೆ.

ವರ್ಗಾವಣೆ ಮಾನದಂಡ: ಕಳೆದ 8 ವರ್ಷಗಳಲ್ಲಿ 5 ವರ್ಷ ಬೆಂಗಳೂರು ಸುತ್ತಮುತ್ತದ ಕಚೇರಿ ವ್ಯಾಪ್ತಿಗಳಲ್ಲಿ ಸೇವೆ ಸಲ್ಲಿಸಿರುವ ಮತ್ತು ಬಿಎಮ್​ರ್ಡಿಎ ವ್ಯಾಪ್ತಿಯ ಹೊರಗೆ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯ ತಾಲೂಕುಗಳಲ್ಲಿ ಕಳೆದ 5 ವರ್ಷಗಳಲ್ಲಿ 4 ಅಥವಾ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿರುವ ಉಪ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಕೇಂದ್ರ ಕಚೇರಿ ಸಹಾಯಕರು ಮತ್ತು ಪ್ರಥಮ ದರ್ಜೆ ಸಹಾಯಕರುಗಳ ವರ್ಗಾವಣೆಗಳನ್ನು ಕೌನ್ಸೆಲಿಂಗ್ ಮೂಲಕ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಜೂ.25ರಂದು ಹೊರಡಿಸಲಾದ ವರ್ಗಾವಣೆ ಮಾರ್ಗಸೂಚಿ ಅನ್ವಯ ಶೇಕಡಾವಾರು ವರ್ಗಾವಣೆ ಮಿತಿಯನ್ನು ಮತ್ತು ಅಂತಿಮ ದಿನಾಂಕವನ್ನು ಸಡಿಲಗೊಳಿಸಿ, ಈ ವರ್ಗಾವಣೆಗಳನ್ನು 2024ರ ಆ.10ರೊಳಗೆ ಪೂರ್ಣಗೊಳಿಸಲು ನಿರ್ಣಯಿಸಲಾಗಿದೆ.

ಪಿಡಿಒ ಬೇಡಿಕೆ ಪರಿಗಣನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 ಮತ್ತು ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನೂ ಕೌನ್ಸೆಲಿಂಗ್ ಮೂಲಕ ನಡೆಸಲು ಸರ್ಕಾರ ಉದ್ದೇಶಿಸಿದೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ನಿಯಂತ್ರಣ) ನಿಯಮಗಳು, 2024ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಕರಡು ನಿಯಮಗಳನ್ನು ಪ್ರಕಟಿಸಿ ಬಾಧಿತರಾಗುವವರಿಂದ ಆಕ್ಷೇಪಣೆ, ಸಲಹೆ ಆಹ್ವಾನಿಸಲಾಗುತ್ತದೆ. ಬಳಿಕ ಕಾನೂನು ಜಾರಿಗೊಳಿಸಿ ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಕಾನೂನು ಕ್ಷೇತ್ರಕ್ಕೆ ಭರ್ಜರಿ ನೀತಿ

* 10 ಹೊಸ ವಿಧೇಯಕ ಪ್ರಸ್ತಾಪ

ಬೆಂಗಳೂರು: ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ‘ಕಾನೂನು ಮತ್ತು ನೀತಿ-2023’ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆರೋಪಿ, ಸಾಕ್ಷಿಗಳ ಹೆಸರನ್ನು ಬಹಿರಂಗವಾಗಿ ಕೂಗುವ ವ್ಯವಸ್ಥೆ ರದ್ದುಗೊಳಿಸುವುದು, ಅಗತ್ಯವಿಲ್ಲದಾದ ವಿಚಾರಣೆ ಸಮಯದಲ್ಲಿ ಆರೋಪಿಗಳಿಗೆ ಕುಳಿತುಕೊಳ್ಳಲು ಡಾಕ್​ನಲ್ಲಿ ಸೌಲಭ್ಯ, ಎಲ್ಲಾ ಹೊಸ ತಾಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆ, ಆಧುನಿಕ ಸಂವಹನದ ವಿಧಾನ ಮೂಲಕ ಸಮನ್ಸ್ ಜಾರಿ, ಹಳತಾದ ಕಾನೂನು ರದ್ದು, ಮಾದರಿ ನ್ಯಾಯಾಲಯಗಳ ಸ್ಥಾಪನೆ, ಕಾನೂನು ಶಿಕ್ಷಣ ನಿರ್ದೇಶನಾಲಯ ಸ್ಥಾಪನೆ ಹೀಗೆ ಹತ್ತುಹಲವು ಸುಧಾರಣಾ ಕ್ರಮಗಳು ನೀತಿಯಲ್ಲಿ ಪ್ರಸ್ತಾಪವಾಗಿದೆ.

ಮಾನವಹಕ್ಕು ಉಲ್ಲಂಘನೆ ಸಂತ್ರಸ್ತರ ಪ್ರಕರಣದಲ್ಲಿ ಅಗತ್ಯ ನೆರವು ನೀಡಲು ಸಂಸ್ಥೆಗಳ ಸ್ಥಾಪನೆ, ವ್ಯಾಜ್ಯ ನಿರ್ವಹಿಸುವ ಸರ್ಕಾರದ ನೀತಿಯಲ್ಲಿ ಮಾದರಿ ಬದಲಾವಣೆ ಮಾಡಿಕೊಳ್ಳುವುದು, ಬಾಕಿ ಇರುವ ಪ್ರಕರಣ ವಿಲೇವಾರಿ ಮಾಡಲು ವಿಶೇಷ ಕ್ರಮ, ಸರಳ ಭಾಷೆಯಲ್ಲಿ ಕಾನೂನು ರಚನೆ ಮತ್ತು ಪ್ರಕಟಣೆ, ಮಹಿಳೆಯರು, ಮಕ್ಕಳು ಹದಿಹರೆಯದವರ, ಹಿರಿಯರ ಅಗತ್ಯತೆ ಪೂರೈಸುವುದು, ಇಲಾಖೆಗಳು ಕಾನೂನು , ನಿಯಮಗಳನ್ನು ಪಾಲಿಸುವಂತೆ ಮಾಡಲು ಕ್ರಮ, ವೃತ್ತಿ ನಿರತರಿಗೆ ಕೆಲಸ ಮಾಡಲು ಅನುಕೂಲಕರ ವಾತಾವರಣ ಕಲ್ಪಿಸುವುದು, ಕಾರಾಗೃಹಗಳಲ್ಲಿ ಕಾನೂನು ನೆರವು ಸೌಲಭ್ಯ, ಅಪರಾಧಕ್ಕಾಗಿ ಸೂಚಿಸಲಾದ ಗರಿಷ್ಠ ಶಿಕ್ಷೆಗಿಂತ ಹೆಚ್ಚು ಅವಧಿ ಬಂಧನದಲ್ಲಿರುವ ವ್ಯಕ್ತಿಗಳ ಬಿಡುಗಡೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ, ಅವಧಿ ಮೀರಿದ ಕಾನೂನು ರದ್ದುಗೊಳಿಸುವುದು, ಕರ್ನಾಟಕ ಆಡಳಿತಾತ್ಮಕ (ಕಾರ್ಯನಿರ್ವಹಣೆ) ಅಧಿನಿಯಮ, ಎಲ್ಲಾ ಕಂದಾಯ ವಿಭಾಗಗಳಲ್ಲಿ ಎಲ್ಲಾ ಆಧುನಿಕ ಸೌಲಭ್ಯ ಇರುವ ವಿಧಿವಿಜ್ಞಾನ ಸಂಸ್ಥೆ ಸ್ಥಾಪನೆ ಮಾಡುವ ಉದ್ದೇಶವನ್ನು ನೀತಿಯಲ್ಲಿ ಸಾರಲಾಗಿದೆ. ಜತೆಗೆ 10 ಹೊಸ ವಿಧೇಯಕ ತರುವ ಪ್ರಸ್ತಾಪ ಮಾಡಿದ್ದು, ಕುಡಿಯುವ ನೀರನ್ನು ಸುರಕ್ಷಿತಗೊಳಿಸುವುದು, ಮತದಾರರ ಮಾಹಿತಿ ಕಳ್ಳತನ ತಡೆಯುವುದು, ಆನ್​ಲೈನ್ ಲೋನ್ ಏಜೆನ್ಸಿಗಳ ನಿಯಂತ್ರಣ ವಿಧೇಯಕ ತರಲಾಗುತ್ತದೆ.

. ವ್ಯಾಜ್ಯಮುಕ್ತ ಗ್ರಾಮ ನಿರ್ವಣಕ್ಕೆ ಪಣ

. 100 ಗ್ರಾಮ ನ್ಯಾಯಾಲಯಗಳ ಸ್ಥಾಪನೆ

. ಕೋರ್ಟಲ್ಲಿ ಕನ್ನಡ ಬಳಕೆಗೆ ಪ್ರೋತ್ಸಾಹ

. ಮಾಹಿತಿ ಸಂವಹನ ತಂತ್ರಜ್ಞಾನ ಸೌಲಭ್ಯ ಪ್ರಗತಿ

. ನ್ಯಾಯಿಕ ಮೂಲಸೌಕರ್ಯ ಆಧುನೀಕರಣ

. ಇದಕ್ಕಾಗಿ 2 ಸಾವಿರ ಕೋಟಿ ರೂ. ಹೂಡಿಕೆ

ನೋಂದಣಿ ಮುದ್ರಾಂಕ ಇಲಾಖೆಯ ಸಬ್​ರಿಜಿಸ್ಟ್ರಾರ್ ಹಾಗೂ ಇತರ ಸಿಬ್ಬಂದಿ ವರ್ಗಾವಣೆ ಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ಸಂಪುಟ ಸಭೆ ನಿರ್ಧರಿಸಿದೆ. ಶೋಷಣೆಮುಕ್ತ ವ್ಯವಸ್ಥೆ ರೂಪುಗೊಳ್ಳಲು ಇದು ಕಾರಣ ಆಗಬಹುದು.| ಎಚ್.ಕೆ.ಪಾಟೀಲ ಕಾನೂನು ಮತ್ತು ಸಂಸದೀಯ ಸಚಿವ

ಸರ್ಕಾರಿ ನೌಕರರಿಗೆ ನಿರಾಸೆ

ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಗುರುವಾರದ ಸಂಪುಟ ಸಭೆ ನಿರಾಸೆ ಮೂಡಿಸಿದೆ. ವಾರದ ಹಿಂದಷ್ಟೇ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ಸಿಎಂ ಭೇಟಿ ಮಾಡಿ, ಮುಂದಿನ ಸಂಪುಟ ಸಭೆಯಲ್ಲಾದರೂ ಅನುಮೋದನೆ ನೀಡಿ ಎಂಬ ಕೋರಿಕೆ ಇಟ್ಟಿದ್ದರು. ಹೀಗಾಗಿ ಗುರುವಾರದ ಸಂಪುಟ ಸಭೆಯಲ್ಲಿ ಬೇಡಿಕೆ ಈಡೇರಬಹುದೆಂದು ಸರ್ಕಾರಿ ನೌಕರರು ನಿರೀಕ್ಷಿಸಿದ್ದರು. ಆದರೆ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿಲ್ಲ. ಈ ನಡುವೆ ಹಣಕಾಸು ಇಲಾಖೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ವಿವರಣೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾಗಿ ಉನ್ನತ ಮೂಲಗಳು ತಿಳಿಸಿವೆ.

ವೇತನ ಆಯೋಗದ ಶಿಫಾರಸಿನ ಪ್ರಕಾರ ಮೂಲ ವೇತನದಲ್ಲಿ ಶೇ. 27.50 ವೇತನ ಹೆಚ್ಚಳ, ಕನಿಷ್ಠ ವೇತನ 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗೆ ಏರಿಕೆ ಸೇರಿ ಹಲವು ವಿಚಾರಗಳಿತ್ತು. ಅದನ್ನು ಪ್ರಸ್ತಾಪಿಸಿ ಹಣಕಾಸು ಇಲಾಖೆ ಉನ್ನತ ಅಧಿಕಾರಿಗಳು, ಶಿಫಾರಸನ್ನು ತಕ್ಷಣ ಅನುಷ್ಠಾನ ಮಾಡಿದರೆ ಎದುರಾಗ ಬಹುದಾದ ಸವಾಲುಗಳ ಬಗ್ಗೆ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.

ಬಜೆಟ್​ನಲ್ಲಿ ಏಳನೇ ವೇತನ ಆಯೋಗದ ಜಾರಿಗಾಗಿ 15 ಸಾವಿರ ಕೋಟಿ ರೂ. ಕಾದಿರಿಸಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದೇ ಕಷ್ಟವಾಗಿದೆ ಎಂದು ವಿವರಿಸಿರುವ ಅಧಿಕಾರಿಗಳು, ಏಳನೇ ವೇತನ ಆಯೋಗದ ಶಿಫಾರಸು ಪ್ರಕಾರ ಮಧ್ಯಂತರ ಪರಿಹಾರದಲ್ಲಿ ಶೇ.10.5 ವಿಲೀನ ಮಾಡಿ ಶೇ.27.50 ಮೂಲ ವೇತನ ಪರಿಷ್ಕರಿಸಬೇಕಾಗುತ್ತದೆ. ಈ ಪ್ರಕಾರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಅಂದಾಜು 17,440 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಕಾದಿರಿಸಿದ್ದು, ಹೆಚ್ಚುವರಿಯಾಗಿ ಎಂಟು ಸಾವಿರ ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ತಿಂಗಳು ಆದಾಯ ಕ್ರೋಡಿಕರಿಸುವುದೇ ಸವಾಲಿನ ಕೆಲಸವಾಗಿದೆ. ಇದರ ಜತೆಗೆ ಪ್ರತಿ ತಿಂಗಳೂ ಹೆಚ್ಚುವರಿ ವೇತನಕ್ಕೆಂದು ಹಣ ಹೊಂದಾಣಿಕೆ ಕಷ್ಟವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇಂಧನ, ಸಾರಿಗೆ ಇಲಾಖೆ ಹೆಚ್ಚಿನ ನೆರವು ಬಯಸುತ್ತಿವೆ. ತೆರಿಗೆ ಸಂಗ್ರಹ ನಿರೀಕ್ಷೆಯಷ್ಟು ಇಲ್ಲ. ಮುಂದೆ ಹೇಗೋ ಗೊತ್ತಿಲ್ಲ. ವೇತನ ಹೆಚ್ಚಳ ಅನಿವಾರ್ಯ, ಆಯೋಗದ ವರದಿಯನ್ನು ತಿರಸ್ಕರಿಸಿಲ್ಲ, ಮುಂದೂಡಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆನ್ನಲಾಗಿದೆ.

ಇತ್ತ ಸರ್ಕಾರಿ ನೌಕರರ ಸಂಘ ಜು.7ರಂದು ರಾಜ್ಯ ಕಾರ್ಯಕಾರಿಣಿ ಕರೆದಿದ್ದು, ವೇತನ ಪರಿಷ್ಕರಣೆಯೇ ಸಭೆಯ ಪ್ರಧಾನ ಅಜೆಂಡಾವಾಗಿದೆ. ಈಗಾಗಲೇ ನಾಲ್ಕು ಬಾರಿ ಸರ್ಕಾರದ ಮುಂದೆ ಕೋರಿಕೆ ಇಟ್ಟಿದ್ದು, ಇನ್ನೂ ಕಾಯಬೇಕೆ ಅಥವಾ ಸಾಂಕೇತಿಕ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆ ಎಂಬುದನ್ನು ಆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಇದೇ ವೇಳೆ, 2018ರ ವಿಧಾನಸಭೆ ಚುನಾವಣೆಗೆ ಮುನ್ನ ತಾವು ವೇತನ ಆಯೋಗ ಜಾರಿ ಮಾಡಿದಾಗ ನೀವು ಕೈ ಹಿಡಿಯಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಮಾತುಗಳು, ಹಾಗೂ ಲೋಕಸಭೆ ಚುನಾವಣೆಯಲ್ಲಿ ಸರ್ಕಾರಿ ನೌಕರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಲಿಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತುಗಳೂ ಸಾಕಷ್ಟು ಚರ್ಚೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net