ವಿದ್ಯಾರ್ಥಿಗಳೇ ಇವರ ಟಾರ್ಗೆಟ್​! ಮಾದಕವಸ್ತು ಮಾರಾಟ, ಇಬ್ಬರ ಬಂಧನ

ವಿಜಯವಾಣಿ - 2025-08-02T173958.301
Published on

ಕೇರಳ: ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಅಕ್ರಮ ಜಾಲದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಇದೀಗ ಕೋಝಿಕ್ಕೋಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 33.45 ಗ್ರಾಂ ಡ್ರಗ್ಸ್ (Drugs)​ ವಶಪಡಿಸಿಕೊಳ್ಳಲಾಗಿದೆ.

'ಮಾತೃಭೂಮಿ' ಸುದ್ದಿ ಸಂಸ್ಥೆ ವರದಿ ಪ್ರಕಾರ, ಬಂಧಿತರನ್ನು ಕೋಝಿಕ್ಕೋಡ್ ನಡುವತ್ತೋಮ್ ಮೂಲದ ಮಠಥಿಲ್ ಪರಮ್ ಎನ್.ಪಿ. ಹೌಸ್ ನ ಮಹರೂಫ್ (33) ಮತ್ತು ಕೋಳತ್ತರ ಮೂಲದ ಕೊಟ್ಟಕುಲಂಗರ ಹೌಸ್​ನ ಮುಹಮ್ಮದ್ ಶಹೀರ್ (27) ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳನ್ನು ನಾರ್ಕೋಟಿಕ್ಸ್ ಸಹಾಯಕ ಆಯುಕ್ತ ಕೆ.ಎ. ಬೋಸ್ ನೇತೃತ್ವದ ನಗರ ಡಿಎನ್ಎಎಸ್ಎಎಫ್ ಮತ್ತು ಬೇಪೋರ್ ಪೊಲೀಸ್ ಠಾಣಾ ಸಬ್-ಇನ್ಸ್ಪೆಕ್ಟರ್ ನೌಶಾದ್ ನೇತೃತ್ವದ ತಂಡ ಬಂಧಿಸಿದೆ.

ಕೇರಳದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ರೈಲಿನಿಂದ ಇಳಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಕೋಝಿಕ್ಕೋಡ್​ಗೆ ಮಾದಕ ದ್ರವ್ಯಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಗೆ ಡ್ರಗ್​​ ಮಾಫಿಯಾ ಮಾಡುವವರ ಜೊತೆ ನಿಕಟ ಸಂಪರ್ಕ ಇರುವ ಬಗ್ಗೆ ಮಾಹಿತಿ ಪಡೆದ ಡಿಎನ್ಎಎಸ್ಎಎಫ್, ಇಬ್ಬರ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಬೆಂಗಳೂರು ಮತ್ತು ಗೋವಾದಿಂದ ಎಂಡಿಎಂಎ ಎಂಬ ಮಾದಕವಸ್ತುವನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿ, ಕೋಝಿಕ್ಕೋಡ್​ನಲ್ಲಿರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾರಾಟ ಮಾಡಲಾಗುತ್ತಿತ್ತು.

ಈ ಗ್ಯಾಂಗ್​ನಲ್ಲಿ ಇವರಿಬ್ಬರು ಪ್ರಮುಖರು. ಡ್ರಗ್​​ ಮಾರಾಟದಿಂದ ಬಂದ ಅಕ್ರಮ ಹಣದಲ್ಲಿ ಲಕ್ಸುರಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಯಾರಿಗೆ ಈ ಡ್ರಗ್​ಗಳನ್ನು ವಿತರಿಸುತ್ತಿದ್ದರು ಮತ್ತು ಮಾಫಿಯಾದಲ್ಲಿ ಅವರ ಸಹಚರರು ಯಾರೆಲ್ಲ ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡುವ ಮೂಲಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ಕೋಝಿಕ್ಕೋಡ್ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net