

ಕಾರ್ಗಲ್: ಶರಾವತಿ ಕಣಿವೆಯ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಕಷ್ಟು ಭಾಗ ಗುಡ್ಡದಿಂದ ಕೂಡಿದೆ. ಹೀಗಾಗಿ ಸರ್ಕಾರದ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಗುಡ್ಡಗಾಡು ಪ್ರದೇಶ ಸವಾಲಾಗಿ ಪರಿಣಮಿಸುತ್ತದೆ. ಮುಂದಿನ ದಿನಗಳನ್ನು ಗಮನದಲ್ಲಿರಿಸಿ ಕಾರ್ಗಲ್ ಪಪಂ ಸಮಗ್ರ ಕುಡಿಯುವ ನೀರಿನ ಯೋಜನೆ ಕಾರ್ಯರೂಪಕ್ಕೆ ತರಲು ಮುಂದಾಗಿದೆ.
ಪಪಂ ವ್ಯಾಪ್ತಿಯ ಎಲ್ಲ ಸಾರ್ವಜನಿಕರಿಗೂ ಕುಡಿಯುವ ನೀರು ತಲುಪಿಸುವುದು ಯೋಜನೆ ಉದ್ದೇಶ. ಕೇಂದ್ರ ಸರ್ಕಾರದ 2.0 ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ 2.50 ಲಕ್ಷ ಲೀ. ಸಾಮರ್ಥ್ಯದ ನೆಲಮಟ್ಟದ ಕುಡಿಯುವ ನೀರಿನ ಜಲ ಸಂಗ್ರಹಾಗಾರ ನಿರ್ಮಾಣಕ್ಕೆ ಪಪಂ ಕ್ರಮ ವಹಿಸುತ್ತಿದೆ.
ಕಾರ್ಗಲ್ ಪಟ್ಟಣದ ವಾರ್ಡ್-2ರ ವ್ಯಾಪ್ತಿಯ ಎತ್ತರದ ಪ್ರದೇಶ ಶಾಂತಿನಗರದಲ್ಲಿ 2 ಎಕರೆ ಕಂದಾಯ ಭೂಮಿ ಇದೆ. ಈ ಜಾಗದಲ್ಲಿ 2.93 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊಳ್ಳಲು ಜಾಗ ಮಂಜೂರಾಗಿದೆ. ನಿರ್ಮಾಣ ನಿರ್ವಹಣೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಡಲಿದೆ.
ಸರ್ವೇ ನಂ.1ರ ವ್ಯಾಪ್ತಿಯ ಪಟ್ಟಣದ ಶಾಂತಿನಗರವು ಜೋಗ-ಕಾರ್ಗಲ್ ಪ್ರದೇಶದ ಮಟ್ಟಿಗೆ ಅತ್ಯಂತ ಎತ್ತರ ಪ್ರದೇಶ. ಇದಕ್ಕೆ ಪೂರಕವಾಗಿ ಸಂಬಂದಿಸಿದ ಇಲಾಖೆಯವರು ಸರ್ವೇ ನಡೆಸಿ ಸಮುದ್ರಮಟ್ಟದಿಂದ ಅತ್ಯಂತ ಎತ್ತರ ಸ್ಥಳ ಎಂದು ತಾಂತ್ರಿಕ ಕಾರಣಕ್ಕೆ ಒಪ್ಪಿಗೆ ಸೂಚಿಸಿದೆ.
ಜೋಗ-ಕಾರ್ಗಲ್ ಪಪಂ ವ್ಯಾಪ್ತಿಯಲ್ಲಿ ಮನೆ ಇಲ್ಲದವರಿಗೆ ಸರ್ಕಾರದಿಂದ ಸೂರು ಒದಗಿಸಲು ಅಂದಿನ ಶಾಸಕ ಕಾಗೋಡು ತಿಮ್ಮಪ್ಪ ಅವರು ಭಾಗ್ಯಮಂದಿರ ಕಾಲನಿ ಮೇಲ್ಭಾಗದ ಗುಡ್ಡದಲ್ಲಿ 20 ಎಕರೆ ಜಾಗ ಮಂಜೂರು ಮಾಡಿಸಿ 450 ಆಶ್ರಯ ನಿವೇಶಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈವರೆಗೆ ಆ ಪ್ರದೇಶಕ್ಕೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಕುಡಿಯುವ ನೀರಿನ ಸೌಲಭ್ಯ ಇಲ್ಲ. ಪ್ರಸ್ತುತ ಇರುವ ಕುಡಿಯುವ ನೀರಿನ ನೆಲಮಟ್ಟದ ಜಲಸಂಗ್ರಹಾಗಾರವು ಅದಕ್ಕಿಂತ ಕೆಳಮಟ್ಟದಲ್ಲಿ ಇರುವುದರಿಂದ ನೀರಿನ ಸಂಪರ್ಕ ಸಾಧ್ಯವಾಗಿಲ್ಲ. ಇದೀಗ ಹೊಸ ಯೋಜನೆಯಿಂದ 450 ಆಶ್ರಯ ನಿವೇಶನಗಳಿಗೆ ಕುಡಿಯುವ ನೀರಿನ ಸಂಪರ್ಕ ಸಾಧ್ಯವಾಗಲಿದೆ.
ಸೌಲಭ್ಯಗಳಿಲ್ಲದೆ ಪಾಳುಬಿದ್ದ ಆಶ್ರಯ ನಿವೇಶನದ ಜಾಗಕ್ಕೆ ಮೂಲ ಸೌಲಭ್ಯ ಒದಗಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಕುಡಿಯುವ ನೀರಿನ ನೆಲಮಟ್ಟದ ಜಲಸಂಗ್ರಹಗಾರದ ನಿರ್ಮಾಣಕ್ಕೆ ಬೇಕಾದ 2 ಎಕರೆ ಜಾಗ ಮಂಜೂರಿಗೆ ಕ್ರಮ ವಹಿಸಿದ್ದಾರೆ. ದಶಕಗಳ ಹಿಂದೆ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಕೆಳಭಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಆದರೆ ಮುಂದುವರಿದಂತೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಎತ್ತರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ.ಹಾಗಾಗಿ ಇದೀಗ ನಿರ್ಮಾಣವಾಗುವ ಟ್ಯಾಂಕ್‌ನಿಂದ ಸಂಪೂರ್ಣವಾಗಿ ಕುಡಿಯುವ ನೀರು ಪೂರೈಸುವುದು ಸ್ಥಳೀಯ ಆಡಳಿತದ ಲೆಕ್ಕಾಚಾರ.
ಎತ್ತರದ ಪ್ರದೇಶದಲ್ಲಿ ನೀರಿನ ಸಂಪರ್ಕವಿಲ್ಲ: ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಲಿಂಗನಮಕ್ಕಿ ಜಲಾಶಯವು ಶರಾವತಿ ಕಣಿವೆ ವ್ಯಾಪ್ತಿಯಲ್ಲಿದ್ದರೂ ಕಾರ್ಗಲ್ ಪಪಂ ಭಾಗದ ತಳಕಳಲೆ, ದೇವರಮಕ್ಕಿ, ಇರಿಗಿಗದ್ದೆ, ಬೆಣ್ಣೆಮನೆ, ಚಪ್ಪಗಾರು ಸೇರಿ ಸಾಕಷ್ಟು ಪ್ರದೇಶಗಳಿಗೆ ಇಂದಿಗೂ ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ. ಈ ಗ್ರಾಮಗಳು ಎತ್ತರದಲ್ಲಿರುವುದೇ ಇದಕ್ಕೆ ಮುಖ್ಯ ಕಾರಣ. ಇದೀಗ ಹೊಸದಾಗಿ ನಿರ್ಮಿಸುವ ಜಲಸಂಗ್ರಹಾಗಾರವು ಇದೆಲ್ಲಕ್ಕಿಂತ ಎತ್ತರದ ಪ್ರದೇಶದಲ್ಲಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.
ಮೂರು ವಾಟರ್ ಟ್ಯಾಂಕ್: ಪ್ರಸ್ತುತ ಕಾರ್ಗಲ್ ಪ್ರದೇಶದ ವಾಟರ್‌ಟ್ಯಾಂಕ್, ಭಾಗ್ಯಮಂದಿರ ಏರಿಯಾದ ಟ್ಯಾಂಕ್ ಮತ್ತು ಜೋಗದಲ್ಲಿ 1 ವಾಟರ್ ಟ್ಯಾಂಕ್‌ನಿಂದ ನೀರು ಪೂರೈಸಲಾಗುತ್ತದೆ. ಆದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯು ಬೆಳವಣಿಗೆ ಆಗುತ್ತಿದ್ದಂತೆ ಸಾಕಾಗುವಷ್ಟು ನೀರು ಪೂರೈಸಲು ಆಗುತ್ತಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25-30 ವರ್ಷಗಳ ಹಿಂದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್‌ಲೈನ್ ಅಳವಡಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಇದು ಕೈಕೊಡುವ ಸಂಭವವಿದೆ.
ಮುಂದಿನ ಐವತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಇರುವ ಜಾಕ್‌ವೆಲ್ ಮತ್ತು ಪಂಪ್‌ಹೌಸ್‌ಗಳನ್ನು ಇನ್ನೂ ಮೇಲ್ದರ್ಜೆಗೇರಿಸಿ ಹೊಸ ಜಲಸಂಗ್ರಹಾಗಾರದಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜೋಗ-ಕಾರ್ಗಲ್ ಪಪಂ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ತಿಳಿಸಿದ್ದಾರೆ.