

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ- ಆರ್‌ಸಿಬಿ ನಡುವಿನ ಪಂದ್ಯಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ 2.94 ಲಕ್ಷ ರೂ. ಸೈಬರ್ ಕಳ್ಳರು ವಂಚಿಸಿದ್ದಾರೆ. ಸುಧಾಮನಗರದ ಆರ್. ಶಶಾಂಕ್ ಮೋಸಕ್ಕೆ ಒಳಗಾದವರು.
ಮೇ 11ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಿಎಸ್‌ಕೆ- ಆರ್‌ಸಿಬಿ ನಡುವಿನ ಪಂಡ್ಯಕ್ಕೆ ಟಿಕೆಟ್ ಲಭ್ಯ ಇರುವುದಾಗಿ ಜಾಹೀರಾತನ್ನು ಶಶಾಂಕ್ ನೋಡಿ ಆನ್‌ಲೈನ್‌ನಲ್ಲಿಯೇ ಸಂಪರ್ಕ ಮಾಡಿದ್ದರು. ಅಪರಿಚಿತ ವ್ಯಕ್ತಿ, ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಕಳುಹಿಸಿ ಬ್ಯಾಂಕ್ ಖಾತೆಗೆ 3 ಟಿಕೆಟ್‌ಗೆ 7,900 ರೂ. ಸಂದಾಯ ಮಾಡುವಂತೆ ಸೂಚಿಸಿದ್ದ.
ನಿಜ ಇರಬೇಕೆಂದು ಶಶಾಂಕ್, ಹಣ ವರ್ಗಾವಣೆ ಮಾಡಿದಾಗ ಟಿಕೆಟ್ ಕೊಟ್ಟಿಲ್ಲ. ಇದನ್ನು ಪ್ರಶ್ನೆ ಮಾಡಿದಾಗ ಹಣ ರಿಂಡ್ ಮಾಡುವುದಾಗಿ ಹೇಳಿ ಹಂತ ಹಂತವಾಗಿ 2.94 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ಬಗ್ಗೆ ಶಶಾಂಕ್ ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.