

ಸ್ಯಾನ್ಫ್ರಾನ್ಸಿಸ್ಕೊ: ಇನ್ಸ್ಟಾ ಗ್ರಾಮ್ ಟಿಕ್ಟಾಕ್, ಯೂಟ್ಯೂಬ್ನ ಕನಿಷ್ಠ 235 ಮಿಲಿಯನ್ (23.5 ಕೋಟಿ) ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿದ್ದು, ಅವು ಡಾರ್ಕ್ವೆಬ್ನಲ್ಲಿ ಲಭ್ಯವಿವೆ ಎಂಬ ಆತಂಕಕಾರಿ ಮಾಹಿತಿಯನ್ನು ಸೈಬರ್ ಭದ್ರತಾ ತಜ್ಞರು ಬಹಿರಂಗಗೊಳಿಸಿದ್ದಾರೆ.
ಗ್ರಾಹಕರ ಪ್ರತಿ ಐದು ದಾಖಲೆಗಳಲ್ಲಿ ಒಂದರಲ್ಲಿ ದೂರವಾಣಿ ಸಂಖ್ಯೆ, ಇ ಮೇಲ್ ವಿಳಾಸ, ಖಾತೆಯ ಹೆಸರು, ಪೂರ್ಣ ಹೆಸರು, ಫೋಟೋ, ಖಾತೆ ವಿವರ ಮತ್ತು ಅವರ ಫಾಲೋವರ್ಸ್ಗಳ ಮಾಹಿತಿಗಳಿವೆ ಎಂದು ತಿಳಿದುಬಂದಿದೆ. ಈ ಮಾಹಿತಿಗಳು ಸ್ಪಾ್ಯಮರ್ಗಳು ಹಾಗೂ ಸೈಬರ್ ಅಪರಾಧಿಗಳಿಗೆ ನೆರವಾಗುವ ಸಾಧ್ಯತೆ ಇದೆ. ಇವುಗಳ ಮೂಲಕ ಅವರು ಜನರ ಖಾತೆಗೆ ಕನ್ನ ಹಾಕಬಹುದು ಅಥವಾ ಅವರ ವೈಯಕ್ತಿಕ ಮಾಹಿತಿಗಳನ್ನಿಟ್ಟುಕೊಂಡು ಬ್ಲಾಕ್ವೆುೕಲ್ ಮಾಡಬಹುದು ಎಂದು ಕಂಪಾರಿಟೆಕ್ ವೆಬ್ನ ಮುಖ್ಯಸ್ಥ ಪಾಲ್ ಬಿಸ್ಚಾಫ್ ಹೇಳಿದ್ದಾರೆ. ಈ ಡೇಟಾ ಸಾರ್ವಜನಿಕವಾಗಿ ಲಭ್ಯವಾಗಿದೆ. ಪ್ರತಿ ಪ್ರತ್ಯೇಕ ಖಾತೆಗಳ ವಿವರ, ಒಟ್ಟಾರೆ ಡೇಟಾಬೇಸ್ ಇರುವುದರಿಂದ ಅದು ಹೆಚ್ಚು ಮೌಲ್ಯಯುತವಾಗಿದೆ ಎಂದು ಬಿಸ್ಚಾಫ್ ಅಭಿಪ್ರಾಯಪಟ್ಟಿದ್ದಾರೆ. ಸೋರಿಕೆಯಾಗಿರುವ ಡೇಟಾವು ಡೀಪ್ ಸೋಷಿಯಲ್ ಎಂಬ ಕಂಪನಿಯ ಹೆಸರಿನೊಂದಿಗೆ ಸಂಬಂಧಪಟ್ಟಿದೆ.
ನಿಷೇಧಿತ ಕಂಪನಿಯೊಂದರ ಕೃತ್ಯ
ತಮ್ಮ ಗ್ರಾಹಕರ ಖಾತೆಗಳ ಡೇಟಾವನ್ನು ಸ್ಕ್ರಾ್ಯಪ್ ಮಾಡಿದ್ದಕ್ಕಾಗಿ 2018ರಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾ ಗ್ರಾಮ್ ಈ ಕಂಪನಿಯನ್ನು ನಿಷೇಧಿಸಿದ್ದವು. ಇನ್ಸ್ಟಾಗ್ರಾಮ್ಂದ ಬಳಕೆದಾರರ ಮಾಹಿತಿಗಳನ್ನು ಸ್ಕ್ರಾ್ಯಪ್ ಮಾಡುವುದು ನಮ್ಮ ನೀತಿಗಳ ಸ್ಪಷ್ಟ ಉಲ್ಲಂಘನೆ. ಡೀಪ್ ಸೋಷಿಯಲ್ ಕಂಪನಿಗೆ ಜಾಲತಾಣ ಪ್ರವೇಶವನ್ನು ರದ್ದುಪಡಿಸಿ 2018ರ ಜೂನ್ನಲ್ಲೇ ನೋಟಿಸ್ ಕಳುಹಿಸಿದ್ದೇವೆ ಎಂದು ಫೇಸ್ಬುಕ್ ವಕ್ತಾರರು ತಿಳಿಸಿದ್ದಾರೆ. ತಾವು ವರದಿ ಮಾಡಿದ ಬಳಿಕ ಡಾರ್ಕ್ ವೆಬ್ನಲ್ಲಿದ್ದ ಮಾಹಿತಿಗಳನ್ನು ತೆಗೆದುಹಾಕಲಾಗಿದೆ. ಡೀಪ್ ಸೋಷಿಯಲ್ ಕಂಪನಿ ಜತೆ ತಮಗೆ ಯಾವುದೇ ಸಂಬಂಧವಿಲ್ಲವೆಂದೂ ಕಂಪಾರಿಟೆಕ್ ಸಂಸ್ಥೆ ತಿಳಿಸಿದೆ. ಆಗಸ್ಟ್ ಆರಂಭದಲ್ಲಿ ಶೈನಿಹಂಟರ್ಸ್ ಎಂದು ಕರೆಯಲ್ಪಡುವ ಹ್ಯಾಕರ್ಗಳ ಗುಂಪು ವಿವಿಧ 18 ಕಂಪನಿಗಳಿಂದ 38.6 ಕೋಟಿ ಬಳಕೆದಾರರ ದಾಖಲೆಗಳನ್ನು ಕದ್ದು, ಹ್ಯಾಕರ್ ಫೋರಂಗೆ ಅಫ್ಲೋಡ್ ಮಾಡಿದ್ದರು.