

ಬೆಂಗಳೂರು: ಯೂಟ್ಯೂಬ್‌ನಲ್ಲಿ ವಿಡಿಯೋಗಳಿಗೆ ಚಂದಾದಾರರಾದರೆ ಪ್ರತಿಯೊಂದಕ್ಕೆ 50 ರೂ. ಕೊಡುವುದಾಗಿ ಮಹಿಳೆಗೆ ಆಮಿಷವೊಡ್ಡಿ ಸೈಬರ್ ಕಳ್ಳರು 2.66 ಕೋಟಿ ರೂ. ವಂಚನೆ ಮಾಡಿದ್ದಾರೆ.ದೊಮ್ಮಲೂರು ಲೇಔಟ್ 52 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಅವರು ಕೊಟ್ಟ ದೂರಿನ ಮೇರೆಗೆ ಪೂರ್ವ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೆಏ ತಿಂಗಳು 6ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಯೂಟ್ಯೂಬ್‌ನಲ್ಲಿ ವಿಡಿಯೋಗೆ ಸಬ್‌ಸ್ಕ್ರೈಬ್ ಆಗುವುದರ ಜತೆಗೆ ಶೇರ್ ಮಾಡಿದರೆ ಪ್ರತಿ ವಿಡಿಯೋಗೆ ತಲಾ 50 ರೂ. ಕೊಡುವುದಾಗಿ ಹೇಳಿದ್ದ. ಇದಕ್ಕೆ ಮಹಿಳೆ ಒಪ್ಪಿಕೊಂಡಾಗ ಆಕೆಯ ಮೊಬೈಲ್‌ಗೆ ಲಿಂಕ್ ಕಳುಹಿಸಿ ಇದರ ಮೇಲೆ ಕ್ಲಿಕ್ ಮಾಡಿ ಗ್ರೂಪ್‌ಗೆ ಸೇರ್ಪಡೆ ಆಗುವಂತೆ ಸೂಚಿಸಿದ್ದ. ಅಲ್ಲಿ ಮತ್ತೆ ಅಪರಿಚಿತ ವ್ಯಕ್ತಿಗಳು, ಟಾಸ್ಕ್‌ಗಳು ಕೊಡುತ್ತಿದ್ದರು. ಜತೆಗೆ ಮತ್ತೊಂದು ಲಿಂಕ್ ಕಳುಹಿಸಿ ಇದರ ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಂಡರೆ ನಿಮ್ಮ ಖಾತೆಗೆ ಹಣ ಬರಲಿದೆ ಎಂದಿದ್ದರು. ಮಹಿಳೆ ಹೊಸ ಲಿಂಕ್ ಮೇಲೆ ಕ್ಲಿಕ್ ಮಾಡಿ ಟಾಸ್ಕ್‌ಗಳನ್ನು ಸ್ವೀಕರಿಸುತ್ತಿದ್ದರು. ಅದಕ್ಕೆ ತಕ್ಕಂತೆ ಹಣವನ್ನು ಸಂತ್ರಸ್ತೆಯ ಖಾತೆಗೆ ಜಮೆ ಮಾಡುತ್ತಿದ್ದರು.
ಒಂದೊಮ್ಮೆ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ ವಂಚಕರು, ಮಹಿಳೆಗೆ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಅದನ್ನು ನಂಬಿದ ಮಹಿಳೆ, ವಂಚಕರು ಕೊಟ್ಟ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 2.66 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಜತೆಗೆ, ಮಹಿಳೆಗೆ ಮಾತ್ರ ತಮ್ಮ ವೆಬ್‌ಸೈಟ್‌ನಲ್ಲಿ ತೆರೆದಿದ್ದ ಖಾತೆಗೆ ಲಾಭಾಂಶವೆಂದು ಹಣ ಜಮೆ ಮಾಡಿರುವುದಾಗಿ ತೋರಿಸುತ್ತಿದ್ದರು.
ಅದನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಂತ್ರಸ್ತೆ, ಎಷ್ಟೇ ಪ್ರಯತ್ನ ಮಾಡಿದರೂ ಹಣ ವಿತ್‌ಡ್ರಾಗೆ ಸಾಧ್ಯವಾಗಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.