

ನವದೆಹಲಿ: ದೇಶದಲ್ಲಿ ಸತತ ಮೂರನೇ ದಿನ 75 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 34.60 ಲಕ್ಷಕ್ಕೂ ಅಧಿಕವಾಗಿದೆ. 24 ಗಂಟೆಗಳಲ್ಲಿ 1,021 ಮಂದಿ ಸೋಂಕಿನಿಂದಾಗಿ ಮೃತರಾಗಿದ್ದು, ಮೃತರ ಸಂಖ್ಯೆ 62,500ಕ್ಕೂ ಹೆಚ್ಚಾಗಿದೆ. 26.49 ಲಕ್ಷ ಜನರು ಗುಣಮುಖರಾಗಿದ್ದು, ಈ ಪ್ರಮಾಣವು ಶೇ. 76.47ಕ್ಕೆ ಏರಿಕೆಯಾಗಿದೆ. ಶೇ. 21.72 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಂದು ಲಕ್ಷ ಪ್ರಕರಣ ದಾಖಲಾದ ಪಟ್ಟಿಯಲ್ಲಿ ಈಗ 10 ರಾಜ್ಯಗಳಿದ್ದು, ದೇಶದಲ್ಲಿ ಪರೀಕ್ಷಿತರ ಸಂಖ್ಯೆ 4 ಕೋಟಿಯನ್ನು ದಾಟಿದೆ. ಕಳೆದ ಮೂರು ದಿನಗಳಿಂದ ಪ್ರತಿದಿನ 9 ಲಕ್ಷಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಪ್ರತಿ 10 ಲಕ್ಷಕ್ಕೆ 29,280 ಜನರಿಗೆ ಪರೀಕ್ಷೆ ನಡೆಸಿದಂತಾಗಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪರೀಕ್ಷಾ ಪ್ರಮಾಣ ಹೆಚ್ಚಾದಂತೆ ಪಾಸಿಟಿವಿಟಿ ಪ್ರಮಾಣವು ಕಡಿಮೆಯಾಗುತ್ತಿದೆ. ದೇಶದಲ್ಲಿ ಕರೊನಾ ಪಾಸಿಟಿವಿಟಿ ಪ್ರಮಾಣವು ಶೇ. 8.57ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ: ಕರೊನಾ ಸೋಂಕಿಗೆ ತುತ್ತಾಗಿ ಗುಣಮುಖನಾದವನ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿರುವುದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿ ಇದೇ ಮೊದಲನೇ ಬಾರಿಗೆ ನಡೆದಿರುವುದಾಗಿ ಅವರು ಹೇಳಿದ್ದಾರೆ.
ಭಾರತದಲ್ಲಿ ಕಡಿಮೆ ಮರಣ: ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಮರಣ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಸಚಿವರ ತಂಡ (ಜಿಒಎಂ) ತಿಳಿಸಿದೆ. ಮರಣ ಪ್ರಮಾಣದಲ್ಲಿ ಎಂಟು ರಾಜ್ಯಗಳು ಶೇ. 81 ಪಾಲು ಪಡೆದುಕೊಂಡಿವೆ. ದೇಶದಲ್ಲಿ 10 ಲಕ್ಷಕ್ಕೆ 2,424 ಜನರು ಸೋಂಕಿಗೆ ತುತ್ತಾಗಿದ್ದು, 44 ಜನರು ಸಾವನ್ನಪ್ಪಿದ್ದಾರೆ. ಆದರೆ ಜಾಗತಿಕವಾಗಿ 10 ಲಕ್ಷಕ್ಕೆ 3,161 ಜನರು ಸೋಂಕಿಗೆ ತುತ್ತಾಗಿದ್ದು, 107 ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಿದೆ.