

ಬೆಂಗಳೂರು: ಗುಜರಿ ವ್ಯಾಪಾರಿಯ ಮನೆ ಬೀಗವನ್ನು ನಕಲಿ ಕೀ ಬಳಸಿ ತೆಗೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ.
ಎಸ್‌ಆರ್‌ಕೆ ಗಾರ್ಡನ್ ನಿವಾಸಿ ಶಹವಾಜ್ ಮನೆಯಲ್ಲಿ ಕಳ್ಳತನವಾಗಿದೆ. 2 ದಿನಗಳ ಹಿಂದೆ ತಮ್ಮ ಕುಟುಂಬ ಸಮೇತ ರಾಮನಗರಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಪರಿಚಯಸ್ಥರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸೆ.25ರ ರಾತ್ರಿ ಶಹವಾಜ್ ಮನೆ ಬೀಗವನ್ನು ನಕಲಿ ಕೀ ಬಳಸಿ ಮನೆಯ ಮೊದಲ ಮಹಡಿಯಲ್ಲಿದ್ದ ಬೆಡ್ ರೂಮ್ ಬಾಗಿಲನ್ನು ಸ್ಕ್ರೂಡ್ರೈವ್ ನಿಂದ ಕಳ್ಳರು ತೆಗೆದಿದ್ದಾರೆ. ಬೀರುವಿನಲ್ಲಿಟ್ಟಿದ್ದ 2.25 ಕೆಜಿ ಚಿನ್ನಾಭರಣ ಮತ್ತು 8 ಲಕ್ಷ ರೂ. ನಗದು ಸೇರಿದಂತೆ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ನಡುರಾತ್ರಿ ಶಹವಾಜ್ ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.