

ಶೃಂಗೇರಿ: ತಾಲೂಕಿನ ಮೆಣಸೆ ಶಾಸಕರ ಮಾದರಿ ಶಾಲೆಯಲ್ಲಿ ಜ.19ರಂದು ಜಿಲ್ಲಾ ಮಟ್ಟದ ಕನ್ನಡ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷ ಸುರೇಂದ್ರ ಯಡದಾಳ್ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ತಿಳಿಸಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಕನ್ನಡ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜಾನಪದವು ಭಾರತದ ಪ್ರಾಚೀನ ಸಂಸ್ಕೃತಿಯ ಸಂಪ್ರದಾಯಗಳನ್ನು ಒಳಗೊಂಡಿದೆ. ಕಲೆ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ಗ್ರಾಮೀಣ ಸಮುದಾಯಗಳ ಸಾರವನ್ನು ಪ್ರತಿನಿಧಿಸುವ ಜೀವನ ಶೈಲಿಯನ್ನು ಒಳಗೊಂಡಿದೆ. ಇದು ಸ್ಥಳೀಯ ಸಂಸ್ಕೃತಿಗಳ ಸರಳತೆ, ಬುದ್ಧಿವಂತಿಕೆ ಮತ್ತು ಪರಂಪರೆ ಪ್ರತಿಬಿಂಬಿಸುತ್ತದೆ. ಜನಪದ ಮೌಲ್ಯಗಳ ಕುರಿತು ಯುವಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, ಶಾಲಾ ಪಠ್ಯಕ್ರಮಗಳಲ್ಲಿ ಜನಪದ ಸಂಸ್ಕೃತಿ ಪರಿಚಯಿಸಬೇಕಿದೆ. ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸುವುದು ಮತ್ತು ಸ್ಥಳೀಯ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಎಸ್.ನಯನ, ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆಶೀಶ್ ದೇವಾಡಿಗ, ಪದಾಧಿಕಾರಿಗಳಾದ ಟಿ.ಟಿ.ಕಳಸಪ್ಪ, ಕುಂಚೂರು ಶ್ರೀನಿವಾಸ್, ಶಿವನಂದ ರಾವ್ ಹೆಗ್ಗದ್ದೆ, ಚಂದ್ರಶೇಖರ್ ನಾರ್ವೆ, ನಾಗೇಶ್ ಕಾಮತ್, ಜೆಸಿಐ ಅಧ್ಯಕ್ಷ ವಿ.ಎಸ್.ಅಶೋಕ್, ಪತ್ರಿಕಾ ವಿತರಕ ಆನಂದ ಸ್ವಾಮಿ ಇದ್ದರು.