

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(M.K. Stalin) ಬುಧವಾರ(ಮಾರ್ಚ್ 05) ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆ ಕುರಿತು ಸರ್ವಪಕ್ಷ ಸಭೆ ನಡೆಸಿದರು. ಈ ಸಭೆಯಲ್ಲಿ, ದಕ್ಷಿಣ ರಾಜ್ಯಗಳ ಸಂಸದರು ಮತ್ತು ಪಕ್ಷದ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ಮಾಡಲಾಯಿತು. ಭಾರತೀಯ ಜನತಾ ಪಕ್ಷ ಸೇರಿದಂತೆ ಇತರ ಕೆಲವು ಪಕ್ಷಗಳು ಈ ಸಭೆಯಿಂದ ದೂರ ಉಳಿದಿರುವುದು ಕಂಡುಬಂದಿತು.
ಕ್ಷೇತ್ರ ಪುನರ್ವಿಂಗಡಣಾ ಸಭೆಯಲ್ಲಿ ಸಮಿತಿ ರಚನೆಯ ಬಗ್ಗೆ ಪ್ರಸ್ತಾಪಿಸಿದ ಸ್ಟಾಲಿನ್, ಸಂಸತ್ತಿನಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ 1971ರ ಜನಗಣತಿಯನ್ನು ಆಧಾರವಾಗಿ ತೆಗೆದುಕೊಳ್ಳಬೇಕು. ಅಲ್ಲದೆ 2026 ರಿಂದ 30 ವರ್ಷಗಳ ಕಾಲ ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆಗೆ 1971ರ ಜನಗಣತಿಯನ್ನು ಆಧಾರವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಮುಖ ವಿರೋಧ ಪಕ್ಷಗಳಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ಕಾಂಗ್ರೆಸ್ ಮತ್ತು ಎಡಪಕ್ಷಗಳು, ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಸಿಎಂ ಸ್ಟಾಲಿನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಉತ್ತರ ರಾಜ್ಯಗಳಲ್ಲಿ ತಮಿಳು ಅಥವಾ ಇತರ ದಕ್ಷಿಣದ ಭಾಷೆಗಳನ್ನು ಕಲಿಸಲು ಕೇಂದ್ರವು ವಿಶೇಷ ಸಂಸ್ಥೆಯನ್ನು ಏಕೆ ಸ್ಥಾಪಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ದೇಶದೊಳಗಿನ ಭಾಷಾ ವೈವಿಧ್ಯತೆಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಅವರು ಕರೆ ನೀಡಿದರು.(ಏಜೆನ್ಸೀಸ್)