

ಚೆನ್ನೈ: ನವವಿವಾಹಿತರು ತಕ್ಷಣ ಮಕ್ಕಳನ್ನು ಪಡೆಯಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್( Tamil Nadu CM Stalin) ಕರೆ ನೀಡಿದ್ದಾರೆ. ತಮಿಳುನಾಡಿನ ಮೇಲೆ ಕತ್ತಿ ನೇತಾಡುತ್ತಿದೆ, ಹೆಚ್ಚು ಮಕ್ಕಳನ್ನು ಹೊಂದದಿದ್ದರೆ ರಾಜ್ಯವು ಗಂಭೀರ ರಾಜಕೀಯ ನಷ್ಟವನ್ನು ಅನುಭವಿಸುತ್ತದೆ ಎಂದು ಸ್ಟಾಲಿನ್ ತಮಿಳು ಜನರಿಗೆ ಎಚ್ಚರಿಸಿದರು.
ಈ ಹಿಂದೆ ನವವಿವಾಹಿತರಿಗೆ ಕುಟುಂಬ ಯೋಜನೆ ಅನುಸರಿಸಲು ಮೊದಲು ಸಮಯ ತೆಗೆದುಕೊಳ್ಳುವಂತೆ ಕೇಳುತ್ತಿದ್ದೆ, ಆದರೀಗ ಈಗ ಹಾಗೆ ಮಾಡುವುದಿಲ್ಲ. ಈಗ ಕೇಂದ್ರ ಸರ್ಕಾರವು ಜಾರಿಗೆ ತರಲು ಯೋಜಿಸುತ್ತಿರುವ ಗಡಿ ನಿರ್ಣಯದಂತಹ ನೀತಿಗಳೊಂದಿಗೆ ನಾನು ಹಾಗೆ ಹೇಳಲು ಸಾಧ್ಯವಿಲ್ಲ. ನಾವು ಕುಟುಂಬ ಯೋಜನೆಯತ್ತ ಗಮನಹರಿಸಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ. ಅದರಿಂದಲೇ ಇಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದೇವೆ. ಆದ್ದರಿಂದ ನಾನು ಈಗ ನವವಿವಾಹಿತರನ್ನು ತಕ್ಷಣವೇ ಮಕ್ಕಳನ್ನು ಹೆತ್ತು ಅವರಿಗೆ ಒಳ್ಳೆಯ ತಮಿಳು ಹೆಸರನ್ನು ಇಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆ ಮಾಡಿದ ಹಿನ್ನೆಲೆಯಲ್ಲಿ ಸ್ಟಾಲಿನ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಲು ಯೋಜಿಸುತ್ತಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ತಮಿಳುನಾಡಿನಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ತಮಿಳುನಾಡು ರಾಜಕೀಯ ಮಹತ್ವವನ್ನು ಕಳೆದುಕೊಳ್ಳುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಜನಸಂಖ್ಯಾ ನಿಯಂತ್ರಣಕ್ಕಾಗಿ ನಾವು ಹಿಂದೆ ಶ್ರಮಿಸಿದ್ದೆವು, ಆದರೆ ಈಗ ಅದು ನಮಗೆ ಬೆದರಿಕೆಯಾಗಬಹುದು ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಪುನರ್ವಿಂಗಡಿಸಿದರೆ, ಉತ್ತರದ ರಾಜ್ಯಗಳಲ್ಲಿ ವಿಶೇಷವಾಗಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತದೆ. ಬಿಜೆಪಿಯೇತರ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ದಕ್ಷಿಣ ರಾಜ್ಯಗಳು ಈಗಾಗಲೇ ಕಳವಳ ವ್ಯಕ್ತಪಡಿಸುತ್ತಿವೆ ಎಂದರು.
ಈ ಗಡಿ ವಿಂಗಡಣೆಯ ಬಗ್ಗೆ ಚರ್ಚಿಸಲು ಮಾರ್ಚ್ 5ರಂದು ಸರ್ವಪಕ್ಷ ಸಭೆ ನಡೆಸಲಾಗುವುದು ಎಂದು ಸ್ಟಾಲಿನ್ ಘೋಷಿಸಿದರು. ಇದು ಯಾರ ವೈಯಕ್ತಿಕ ಸಮಸ್ಯೆಯೂ ಅಲ್ಲ, ಬದಲಾಗಿ ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳಿದರು. ಈ ಸರ್ವಪಕ್ಷ ಸಭೆಗೆ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ 40 ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಹೇಳಿದರು. ಈ ವಿಷಯದ ಬಗ್ಗೆ ಎಲ್ಲರೂ ಅಹಂಕಾರವನ್ನು ಬದಿಗಿಟ್ಟು ಒಟ್ಟಾಗಿ ಬರಬೇಕೆಂದು ಅವರು ಕರೆ ನೀಡಿದರು. ಸರ್ವಪಕ್ಷ ಸಭೆ ನಡೆಸಿದ ನಂತರ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು ಈ ಲೋಕಸಭಾ ಕ್ಷೇತ್ರಗಳ ಗಡಿ ವಿಂಗಡಣೆಯ ಬಗ್ಗೆ ಮುಂದುವರಿಯುವುದಾಗಿ ಸ್ಟಾಲಿನ್ ಬಹಿರಂಗಪಡಿಸಿದರು.(ಏಜೆನ್ಸೀಸ್)