ಮುಂಗಾರು ಹಂಗಾಮಿನ ಭಾರಿ ಮಳೆ; 19 ಜಿಲ್ಲೆಗಳಿಗೆ ನೆರೆಘಾತ!

Front lead
Published on

ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ 19 ಜಿಲ್ಲೆಗಳಲ್ಲಿ 15 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಹಾನಿ ಸಂಭವಿಸಿರುವುದು ಜನರು ಮತ್ತು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇತ್ತ ಉತ್ತರ ಕರ್ನಾಟಕವನ್ನು ಕಂಗಾಲಾಗಿಸಿರುವ ಅಕ್ಟೋಬರ್ ಮಳೆಗೆ 2.54 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿರುವುದು ಗಾಯದ ಮೇಲೆ ಬರೆ ಎಳೆದಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಅನುದಾನದ ನಿರೀಕ್ಷೆಯಲ್ಲಿರುವುದರಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ಅಕ್ಟೋಬರ್ ಮಳೆ ಹಾಗೂ ಪ್ರವಾಹದ ಹಾನಿಯ ಅಂದಾಜು ಇನ್ನೂ ನಡೆಯಬೇಕಿರುವುದರಿಂದ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ರಾಜ್ಯದಲ್ಲಿ ಕಳೆದ 60 ವರ್ಷಗಳಲ್ಲೇ ಅಧಿಕ ಮಳೆಯಾಗಿದೆ. ಮುಂಗಾರು ಹಂಗಾಮಿನ 122 ದಿನಗಳಲ್ಲಿ 50ಕ್ಕೂ ಹೆಚ್ಚು ದಿನ ಮಳೆ ಬಿದ್ದಿರುವುದೂ ದಾಖಲೆ.

ಎಲ್ಲಿ ಹೆಚ್ಚು ಮಳೆ?: ರಾಜ್ಯದ ಮುಂಗಾರು ಹಂಗಾಮಿನ ಆರಂಭದಿಂದ (ಜೂನ್- ಸೆಪ್ಟಂಬರ್ ಅಂತ್ಯದವರೆಗೆ)ಒಟ್ಟಾರೆ ಶೇ.245 ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.83, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ.331, ಮಲೆನಾಡಿನ ಜಿಲ್ಲೆಗಳಲ್ಲಿ ಶೇ.198 ಹಾಗೂ ಕರಾವಳಿಯಲ್ಲಿ ಶೇ.435 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ವಾಡಿಕೆಗಿಂತ ಶೇ.79 ಹೆಚ್ಚು ಮಳೆಯಾಗಿರುವುದು ವಿಶೇಷ. ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಶೇ.9 ಕಡಿಮೆ ಮಳೆ ದಾಖಲಾಗಿದೆ. ಸೆಪ್ಟಂಬರ್ ಅಂತ್ಯದ ತನಕ ಕೃಷಿ, ತೋಟಗಾರಿಕೆ, ತೋಟದ ಬೆಳೆಗಳು, ಮೂಲ ಸೌಕರ್ಯದಿಂದ ಆಗಿರುವ ನಷ್ಟದ ಅಂದಾಜು 15,108 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ಈ ಹಾನಿಯನ್ನು ಎರಡು ಹಂತದಲ್ಲಿ ಅಂದಾಜು ಮಾಡಲಾಗಿತ್ತು. ಜು.25 ರಿಂದ ಸೆ.15 ರ ತನಕ ಆಗಿರುವ ಹಾನಿಯ ಪ್ರಮಾಣ 9440 ಕೋಟಿ ರೂ.ಗಳಾಗಿದ್ದರೆ, ಸೆ.16 ರಿಂದ 30 ರ ತನಕ ನಡೆದಿರುವ ನಷ್ಟದ ಅಂದಾಜು 5667 ಕೋಟಿ ರೂ.ಗಳಾಗಿದೆ. ಅ.1 ರಿಂದ 15 ರ ತನಕ ಆಗಿರುವ ಮಳೆಯಿಂದ ಆದ ನಷ್ಟವನ್ನು ಅಂದಾಜು ಮಾಡುವ ಕಾರ್ಯ ನಡೆದಿದೆ.

ಕೇಂದ್ರದಿಂದ ಎಷ್ಟು ಬರಬೇಕು?: ಕೇಂದ್ರ ಸರ್ಕಾರ ಎಸ್​ಡಿಆರ್​ಎಫ್ ನಿಧಿಯಲ್ಲಿ ರಾಜ್ಯಕ್ಕೆ ಪರಿಹಾರ ನೀಡಬೇಕಾಗುತ್ತದೆ. ಆ ನಿಯಮಾವಳಿಗಳ ಪ್ರಕಾರ ರಾಜ್ಯಕ್ಕೆ 1306 ಕೋಟಿ ರೂ. ದೊರಕಬೇಕಾಗಿದೆ.

ಬಂದು ಹೋದ ಅಧ್ಯಯನ ತಂಡ: ಸೆಪ್ಟಂಬರ್​ವರೆಗಿನ ಮಳೆಯ ನಷ್ಟದ ಅಂದಾಜಿಗೆ ಕೇಂದ್ರ ಅಧ್ಯಯನ ತಂಡ ಬಂದು ಹೋಗಿದೆ. ಆದರೆ ವರದಿ ಕೊಟ್ಟಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ರಾಜ್ಯಕ್ಕೆ ಇಲ್ಲ. ಕೇಂದ್ರ ಗೃಹ ಸಚಿವಾಲಯವು ಅಧ್ಯಯನ ತಂಡದ ವರದಿಯನ್ನು ಪರಿಶೀಲನೆ ಮಾಡಬೇಕು, ಮಾರ್ಚ್​ನಲ್ಲಿ ರಾಜ್ಯ ಸಲ್ಲಿಸಿದ್ದ ಮನವಿಗೆ ಆಗಸ್ಟ್​ನಲ್ಲಿ ಕೇಂದ್ರದಿಂದ 790.5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ಹೇಳಿವೆ.

ಹೆಚ್ಚು ಮಳೆಯಾದ ಜಿಲ್ಲೆ: ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ದಾವಣಗೆರೆ, ಕಲಬುರಗಿ, ಗದಗ, ಹಾಸನ, ಕೊಪ್ಪಳ, ಮೈಸೂರು, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಯಾದಗಿರಿ, ಚಿತ್ರದುರ್ಗ

ಹಾನಿಯ ಮೊತ್ತ

  • ಬೆಳೆ-9952 ಕೋಟಿ ರೂ.ಗಳು
  • ಮೂಲಸೌಕರ್ಯ-4851 ಕೋಟಿ ರೂ.
  • ಮನೆಗಳ ಹಾನಿ-304 ಕೋಟಿ ರೂ.
  • ಒಟ್ಟು ನಷ್ಟ -15108 ಕೋಟಿ ರೂ.
  • ಪರಿಹಾರ ಕೇಂದ್ರ- 54
  • ಪರಿಹಾರ ಕೇಂದ್ರದಲ್ಲಿ ಆಶ್ರಯ 7776 ಜನ

ಕೇಂದ್ರಕ್ಕೆ ಮತ್ತೊಮ್ಮೆ ಮನವಿ : ಅಕ್ಟೋಬರ್​ನಲ್ಲಾಗಿರುವ ಮಳೆ ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅ.22ರೊಳಗೆ ವರದಿ ನೀಡುವಂತೆ ಡಿಸಿಗಳಿಗೆ ಸೂಚಿಸಿದ್ದು, 30ರೊಳಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ.

ಪರಿಹಾರಕ್ಕೆ ಹಣ ಬೇಕು: ರಾಜ್ಯದಲ್ಲಿ ಆರ್ಥಿಕ ಸಂಕಷ್ಟದ ಜತೆಗೆ ಕರೊನಾ ದಿಂದಾಗಿಯೂ ಹಾನಿ ಹೆಚ್ಚಾಗಿದೆ. ಇದರಿಂದಾಗಿ ಪರಿಹಾರ ಕಾರ್ಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ 85 ಕೋಟಿ ರೂ.ಗಳನ್ನು ಪ್ರಾಥಮಿಕ ಹಂತದ ಪರಿಹಾರ ಕಾರ್ಯಗಳಿಗೆ ವೆಚ್ಚ ಮಾಡಲಷ್ಟೇ ಸಾಕಾ ಗುತ್ತದೆ. ಕೇಂದ್ರ ನೆರವಿನ ಹಸ್ತ ಚಾಚಿದರೆ ಮಾತ್ರ ಪರಿಹಾರ ಕಾರ್ಯಗಳು ಚುರುಕಾಗಲು ಸಾಧ್ಯ.

ಮೂಲಸೌಕರ್ಯ ಹಾನಿ

  • 30455 ಕಿಮೀ ರಸ್ತೆ
  • 5080 ಸರ್ಕಾರಿ ಕಟ್ಟಡಗಳು
  • 3481 ಸೇತುವೆ
  • 444 ನೀರಾವರಿ ಯೋಜನೆ
  • 1659 ಕೆರೆಗಳು
  • 29462 ಮನೆಗಳು

ಹಾನಿ ಲೆಕ್ಕಾಚಾರ

(ಸೆಪ್ಟಂಬರ್ ಅಂತ್ಯದವರೆಗೆ)

  • ಕೃಷಿ ಬೆಳೆ- 8.68 ಲಕ್ಷ ಹೆಕ್ಟೇರ್
  • ತೋಟಗಾರಿಕೆ ಬೆಳೆ- 0.88 ಲಕ್ಷ ಹೆಕ್ಟೇರ್
  • ತೋಟದ ಬೆಳೆ- 0.51 ಲಕ್ಷ ಹೆಕ್ಟೇರ್
  • ಒಟ್ಟು -10.51 ಲಕ್ಷ ಹೆಕ್ಟೇರ್

ಅಕ್ಟೋಬರ್ ನಷ್ಟ

(ಅ.16ರವರೆಗಿನ ಅಂದಾಜು)

  • ಜನರ ಸಾವು- 10
  • ಜಾನುವಾರು ಸಾವು- 604
  • ಮನೆಗಳ ಹಾನಿ- 8071
  • ಕೃಷಿ ಬೆಳೆ- 2,29,956 ಹೆಕ್ಟೇರ್
  • ತೋಟಗಾರಿಕೆ ಬೆಳೆ- 24811 ಹೆಕ್ಟೇರ್

ರಾಜ್ಯ ಸರ್ಕಾರದ ಮುಂಜಾಗ್ರತಾ ಕ್ರಮದಿಂದಾಗಿ ಹಾನಿಯ ಪ್ರಮಾಣ ಕಡಿಮೆಯಾಗಿದೆ. ಕಲಬುರಗಿ, ಬೀದರ್ ಹಾಗೂ ಇತರ ಜಿಲ್ಲೆಗಳಿಗೆ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಸಮಿತಿಗಳು ಕೈಜೋಡಿಸಿದವು. ಮಳೆ ಮುಂಜಾಗ್ರತೆ ಕುರಿತು ಮಾಹಿತಿ ನೀಡುವ ವ್ಯವಸ್ಥೆಯಿಂದ ಅನುಕೂಲವಾಯಿತು. | ಮನೋಜ್ ರಾಜನ್ ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

ಕೇಂದ್ರದಿಂದ ಅಗತ್ಯ ನೆರವು

ಬೆಂಗಳೂರು: ಭಾರಿ ಮಳೆ, ಪ್ರವಾಹದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜನ-ಜೀವನ ಸಹಜ ಸ್ಥಿತಿಗೆ ತರುವುದಕ್ಕೆ ಅಗತ್ಯವಿರುವ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ರಾಜ್ಯಕ್ಕೆ ಅಭಯ ನೀಡಿದ್ದಾರೆ. ನೆರೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿರುವೆ. ನೊಂದವರ ಬೆನ್ನಿಗೆ ಕೇಂದ್ರ ನಿಲ್ಲಲಿದ್ದು, ಯುದ್ಧೋಪಾದಿಯಲ್ಲಿ ಸಾಗಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸಾಧ್ಯವಾದ ಎಲ್ಲ ನೆರವು ಒದಗಿಸಲು ಬದ್ಧವೆಂದು ಮೋದಿ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net