ಜಗತ್ಕಾರಣ ಕೃಷ್ಣ ಯುದ್ಧತಂತ್ರ ನಿಪುಣ, ಶಿಷ್ಟರಕ್ಷಕ

dfg
Published on
ಶತ್ರು ಪ್ರಬಲನಾಗಿದ್ದರೆ ಅವನನ್ನು ಮೊದಲು ದುರ್ಬಲನನ್ನಾಗಿಸಬೇಕು. ನಂತರ ಅವನ ಸಂಹಾರ ಸುಲಭ ಎಂಬುದು ಕೃಷ್ಣನ ಯುದ್ಧನೀತಿ. ಈ ನೀತಿಯನ್ನು ಜರಾಸಂಧ, ಕರ್ಣ ಮೊದಲಾದವರ ವಿಷಯದಲ್ಲಿ ಕೃಷ್ಣ ಮಾಡಿತೋರಿಸಿದ್ದಾನೆ. ಅತ್ಯಂತ ಪ್ರಬಲನಾದ ಕಂಸನನ್ನು ಏಕಾಂಗಿಯಾಗಿ ಕೊಂದು ಕಂಸನ ಮಾವನಾದ ಜರಾಸಂಧನಲ್ಲಿ ಭಯ ಹುಟ್ಟಿಸಿದ.
|ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಾದಿರಾಜ ಮಠ, ಉಡುಪಿ

ಭರತ ಭೂಮಿಯಲ್ಲಿ 5,000 ವರ್ಷಗಳ ಹಿಂದೆ ಸಾಮಾಜಿಕ ಬದಲಾವಣೆಗೆ ಕಾರಣನಾದ ಭಗವಂತ ಶ್ರೀಕೃಷ್ಣ ಭಾವುಕ ಭಕ್ತರಿಗೆ ಇಂದಿಗೂ ಅತೀ ಹತ್ತಿರವಾಗಿದ್ದಾನೆ. ಭೂಭಾರ ಹರಣಕ್ಕೆ ಅವತರಿಸಿದ ಭಗವಂತನಿಗೆ ಸಾವಿರಾರು ವರ್ಷಗಳಿಂದ ಈ ದೇಶದ ಜನತೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಕೃಷ್ಣನ ಜನ್ಮದಿನ ದೇಶಕ್ಕೆ ಸಂಭ್ರಮ. ಮಹದುಪಕಾರ ಮಾಡಿದವರನ್ನು ಸದಾ ಸ್ಮರಿಸುವುದು ಭಾರತೀಯರ ಸಂಸ್ಕಾರ.

ಸ್ವಾರ್ಥವಿಲ್ಲದ, ಸಮಾಜದ ಹಿತವನ್ನೇ ಬಯಸಿದ ಆದರ್ಶ ಚೇತನ ಶ್ರೀಕೃಷ್ಣ. ಬಾಲ್ಯದಿಂದಲೇ ಬಲಿಷ್ಠರೊಂದಿಗೆ ವಿರೋಧವನ್ನು ಕಟ್ಟಿಕೊಂಡವ. ಕಂಸ, ಜರಾಸಂಧ ಕೃಷ್ಣನ ಬಾಲ್ಯದ ಶತ್ರುಗಳು. ಕಂಸ ತನ್ನ ಮಾವನೆಂದು ಕೃಷ್ಣ ಅಭಿಮಾನ ಮಾಡಲಿಲ್ಲ. ನರಕಾಸುರ ವರಾಹಾವತಾರದ ತನ್ನ ಮಗನೆಂದು ಮಮತೆ ತೋರಲಿಲ್ಲ. ಬಾಲಹಂತಕನಾದ ಕಂಸ, ನರಹಂತಕನಾದ ಜರಾಸಂಧ, ಸ್ತ್ರೀಕಂಟಕನಾದ ನರಕಾಸುರ ಎಲ್ಲರನ್ನೂ ಅಂತಕನೆಡೆಗೆ ಕಳುಹಿಸಿದ.

ಯುದ್ಧತಂತ್ರ ನಿಪುಣ: ಶತ್ರು ಪ್ರಬಲನಾಗಿದ್ದರೆ ಅವನನ್ನು ಮೊದಲು ದುರ್ಬಲನನ್ನಾಗಿಸಬೇಕು. ನಂತರ ಅವನ ಸಂಹಾರ ಸುಲಭ ಎಂಬುದು ಕೃಷ್ಣನ ಯುದ್ಧನೀತಿ. ಈ ನೀತಿಯನ್ನು ಜರಾಸಂಧ, ಕರ್ಣ ಮೊದಲಾದವರ ವಿಷಯದಲ್ಲಿ ಕೃಷ್ಣ ಮಾಡಿತೋರಿಸಿದ್ದಾನೆ. ಅತ್ಯಂತ ಪ್ರಬಲನಾದ ಕಂಸನನ್ನು ಏಕಾಂಗಿಯಾಗಿ ಕೊಂದು ಕಂಸನ ಮಾವನಾದ ಜರಾಸಂಧನ ಹೃದಯದಲ್ಲಿ ಮೊದಲು ಭಯವನ್ನು ಹುಟ್ಟಿಸಿದ. ನಂತರ 18 ಬಾರಿ ಅವನ ಪ್ರಬಲವಾದ ಎಲ್ಲಾ ಸೈನ್ಯವನ್ನೂ ನಾಶಪಡಿಸಿ, ಯಾವ ಕ್ಷಣದಲ್ಲಿಯೂ ನಿನ್ನನ್ನು ಕೊಲ್ಲುವ ಶಕ್ತಿ ನನ್ನಲ್ಲಿದೆ ಎಂದು ತೋರಿಸಿದ. ನಂತರ ಮಾನಸಿಕವಾಗಿ ದುರ್ಬಲನಾಗಿ ಕೊರಗುತ್ತಿದ್ದ ಜರಾಸಂಧನನ್ನು ನಿರಾಯುಧನಾಗಿಯೇ ಹೋಗಿ ಭೀಮಸೇನನ ಕೈಯಿಂದ ಅವನನ್ನು ಕೊಲ್ಲಿಸಿದ. ಜರಾಸಂಧ ಎಲ್ಲಾ ದುಷ್ಟರ ಕೇಂದ್ರ. ಹೀಗಾಗಿಯೇ ಕೃಷ್ಣ ಆರಂಭದಲ್ಲಿ ಅವನನ್ನು ಕೊಲ್ಲದೆ ಭಯವನ್ನು ಮಾತ್ರ ಹುಟ್ಟಿಸಿ, ಎಲ್ಲಾ ದುಷ್ಟರನ್ನು ಒಂದೆಡೆ ಕಲೆಹಾಕಿದ ಬಳಿಕ ಮಧುರೆಯಲ್ಲಿಯೇ ಎಲ್ಲಾ ದುಷ್ಟರನ್ನು ಸಂಹರಿಸಿದ. ಉಗ್ರರನ್ನು ಸಮೂಲ ನಾಶಮಾಡುವುದು ಕೃಷ್ಣನ ಉದ್ದೇಶವಾಗಿತ್ತು. ಪ್ರತೀ ಬಾರಿಯೂ ಯುದ್ಧದಲ್ಲಿ ಜರಾಸಂಧನ ಲಕ್ಷಾಂತರ ಸೈನಿಕರು ಮೃತಪಡುತ್ತಿದ್ದರು. ಮತ್ತೆ ಮತ್ತೆ ದುಷ್ಟರ ಹಿಂಡು ಕಟ್ಟಿಕೊಂಡು ಆತ ಬರುತ್ತಿದ್ದ. ಅವರೆಲ್ಲನ್ನೂ ಕೃಷ್ಣ ನಾಶ ಮಾಡುತ್ತಿದ್ದ. ಹೀಗೆ ಉಗ್ರ ನಿಗ್ರಹ ತಂತ್ರಗಾರಿಕೆಗೆ ಕೃಷ್ಣ ಮಾದರಿ. ಇದು ಕೃಷ್ಣನ ಯುದ್ಧತಂತ್ರ.

ದುರ್ಯೋಧನನ ಅತ್ಯಂತ ವಿಶ್ವಾಸಕ್ಕೆ ಪಾತ್ರನಾದವ, ಬಹಳ ಬಲಿಷ್ಠನಾದವ ಕರ್ಣ. ಯುದ್ಧದ ಮೊದಲು ಕರ್ಣನನ್ನು ದೂರಕ್ಕೆ ಕರೆದು ಏಕಾಂತದಲ್ಲಿ ಅವನ ಹುಟ್ಟಿನ ಗುಟ್ಟನ್ನು ಕೃಷ್ಣ ಹೇಳುತ್ತಾನೆ. ಇದರಿಂದ ಕರ್ಣ ಮಾನಸಿಕವಾಗಿ ದುರ್ಬಲನಾಗುತ್ತಾನೆ. ಕರ್ಣನೊಂದಿಗೆ ಏಕಾಂತದಲ್ಲಿ ಮಾತನಾಡಿ, ದುರ್ಯೋಧನನ ತಲೆಯನ್ನೂ ಕೆಡಿಸುತ್ತಾನೆ. ಪ್ರಬಲರಾದ ಶತ್ರುಗಳನ್ನು ಮಾನಸಿಕವಾಗಿ ದುರ್ಬಲರನ್ನಾಗಿಸುವ ಕೃಷ್ಣನ ತಂತ್ರ ಸಾರ್ವಕಾಲಿಕವಾಗಿ ಮಂತ್ರಿಗಳಿಂದಲೂ ಮನನೀಯವಾಗಿದೆ.

ಕೃಷ್ಣನ ಸಿದ್ಧಾಂತ ವಿಶಿಷ್ಟ: ಕೃಷ್ಣನ ಸಿದ್ಧಾಂತ ಪ್ರತಿಪಾದನೆಯೂ ಬಲು ವಿಶಿಷ್ಟ. ಮಹಾಭಾರತ ಯುದ್ಧಕ್ಕೆ ಮುನ್ನ ನಡೆದ ಸಂಧಾನ ಸಂದರ್ಭದಲ್ಲಿ ದುರ್ಯೋಧನ ಹೇಳುತ್ತಾನೆ- ಊಟ ಮಾಡಿ ಹೋಗು ಎಂದು. ಅದಕ್ಕೆ ಕೃಷ್ಣನ ಉತ್ತರ- ಸಂಪ್ರೀತಿ ಭೋಜ್ಯಾನಿ ಅನ್ನಾನಿ... ಊಟಕ್ಕೆ ಎರಡು ಕಾರಣಗಳು. ಒಂದೋ ಊಟಕ್ಕೆ ಗತಿಯಿಲ್ಲ ಅಥವಾ ಪ್ರೀತಿಯಿಂದ ಕರೆದರೆ. ಇದನ್ನು ಹೊರತು ಮೂರನೇ ಕಾರಣವಿಲ್ಲ ಎಂದು ಹೇಳಿ ನೇರ ವಿದುರನ ಮನೆಗೆ ನಡೆದ ನಿಷ್ಠುರವಾದಿ ಕೃಷ್ಣ.

ಗೋವು, ಗೋಪಾಲಕರು, ಪಶು, ಪಕ್ಷಿ, ವೃಕ್ಷ, ಪ್ರಕೃತಿಯ ಬಗೆಗಿನ ಕಾಳಜಿ, ಜ್ಞಾನ, ಬಲವನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವ ಯುಕ್ತಿ ಕೃಷ್ಣನ ದೈವತ್ವವನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ಕೃಷ್ಣನ ಮತ್ತೊಂದು ವಿಶಿಷ್ಟ ಗುಣವೆಂದರೆ ಅನೇಕ ರಾಜರನ್ನು ಸೋಲಿಸಿ ಯುದ್ಧವನ್ನು ಗೆದ್ದರೂ ತಾನು ಅಧಿಕಾರಕ್ಕೆ ಏರದೆ ಸೂಕ್ತ ಉತ್ತರಾಧಿಕಾರಿಯನ್ನು ಪಟ್ಟದಲ್ಲಿರಿಸಿ ರಾಜ್ಯವನ್ನು ಮುನ್ನಡೆ ಸಿರುವುದು. ಇದಲ್ಲದೆ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ ಎನಿಸಿದ್ದಾನೆ.

ಸಮಾಜಕ್ಕೆ ಅಹಿತವನ್ನುಂಟು ಮಾಡುವವರು ಬಂಧುಗಳು ಎಂದು ನೋಡದೆ ಕಂಸ, ನರಕಾಸುರ, ಶಿಶುಪಾಲರನ್ನು ಹೇಗೆ ಸಂಹಾರ ಮಾಡಿದನೋ, ಅದೇ ರೀತಿ ತನ್ನಲ್ಲಿ ಬಹಳ ಭಕ್ತಿ ಮಾಡುತ್ತಿದ್ದರೂ ದುಷ್ಟರೊಂದಿಗೆ ಕೈ ಜೋಡಿಸಿದ ಭೀಷ್ಮ-ದ್ರೋಣರನ್ನೂ ಹಿರಿಯರು, ರಾಜಗುರು ಗಳು, ತನ್ನವರು ಎಂದು ನೋಡದೆ ನಿರ್ದಾಕ್ಷಿಣ್ಯವಾಗಿ ಸಂಹಾರ ಮಾಡಿಸಿದ. ಹೀಗೆ ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ಹೋರಾಡಿದ ಗೀತಾಚಾರ್ಯ ಶ್ರೀಕೃಷ್ಣ ಮಾತಿನಿಂದಲೂ, ನಡತೆಯಿಂದಲೂ ಸರ್ವರಿಗೂ ಸಾರ್ವಕಾಲಿಕವಾಗಿ ಆದರ್ಶನಾಗಿದ್ದಾನೆ.

ಉಡುಪಿಯಲ್ಲಿ ಜನ್ಮಾಷ್ಟಮಿ: ಉಡುಪಿ ಕೃಷ್ಣ ಮಠದಲ್ಲಿ ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸಂಪ್ರದಾಯಕ್ಕೆ ಸೀಮಿತವಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಈ ಬಾರಿ ನಿರಾತಂಕವಾಗಿ ನಡೆಯಲಿದ್ದು, ಕೃಷ್ಣಭಕ್ತರಲ್ಲಿ ಮತ್ತೆ ಸಡಗರ ಮನೆಮಾಡಿದೆ.

ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಮಠದಲ್ಲಿ ಶುಕ್ರವಾರ ದಿನವಿಡೀ ಭಜನೆ, ಮುದ್ದುಕೃಷ್ಣ ವೇಷ ಸ್ಪರ್ಧೆ, ಸ್ಯಾಕ್ಸೋಫೋನ್ ವಾದನ ಮುಂತಾದ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಪ್ರಯುಕ್ತ ಶನಿವಾರ ಬೆಳಗ್ಗೆ 10 ಗಂಟೆಗೆ ಕೃಷ್ಣ ಮಠದಲ್ಲಿ ಪಲ್ಲಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ಗಂಟೆಗೆ ರಥಬೀದಿಯಲ್ಲಿ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಸ್ವರ್ಣರಥದಲ್ಲಿ ಹಾಗೂ ಅನಂತೇಶ್ವರ ಚಂದ್ರಮೌಳೀಶ್ವರ ವಿಗ್ರಹಗಳನ್ನು ನವರತ್ನ ರಥದಲ್ಲಿ ಸ್ಥಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಕೃಷ್ಣ ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೊಲ್ಲರು ಪ್ರತಿ ಗುರ್ಜಿ ಮೇಲೇರಿ ಮೊಸರಿನ ಮಡಕೆ ಒಡೆದು ಕೃಷ್ಣನ ಮೊಸರುಪ್ರೀತಿಯನ್ನು ಸಾರಲಿದ್ದಾರೆ. ರಥದಿಂದ ಭಕ್ತರಿಗೆ ಸ್ವಾಮೀಜಿ ಚಕ್ಕುಲಿ ಉಂಡೆ ಪ್ರಸಾದ ವಿತರಿಸಿದ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನಗೊಳಿಸಲಾಗುತ್ತದೆ.

ನಾಮಗಳು ಹಲವು: ಶ್ರೀಕೃಷ್ಣನನ್ನು ಮಥುರಾದಲ್ಲಿ ಕನ್ಹಯ್ಯಾ, ಓಡಿಸ್ಸಾದಲ್ಲಿ ಜಗನ್ನಾಥ, ಮಹಾರಾಷ್ಟ್ರದಲ್ಲಿ ವಿಠಲ, ರಾಜಸ್ತಾನದಲ್ಲಿ ಶ್ರೀನಾಥ, ಗುಜರಾತದಲ್ಲಿ ದ್ವಾರಕಾದೀಶ, ಉಡುಪಿ ಯಲ್ಲಿ ಕೃಷ್ಣ, ಕೇರಳದಲ್ಲಿ ಗುರುವಾಯೂರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ.

ಅವತಾರ ಪುರುಷ

ಕೃಷ್ಣ ಹುಟ್ಟಿದ್ದು 5252 ವರ್ಷಗಳ ಹಿಂದೆ. ಅಂದರೆ ಜುಲೈ 19, ಕ್ರಿಪೂ 3228ರಂದು. ಶ್ರಾವಣ ಮಾಸದ ಗೋಕುಲ ಅಷ್ಟಮಿಯ ರೋಹಿಣಿ ನಕ್ಷತ್ರದಂದು ಮಥುರಾದಲ್ಲಿ ಜನಿಸಿದ. 10 ವರ್ಷ 8 ತಿಂಗಳ ವಯಸ್ಸಿನವರೆಗೆ ವೃಂದಾವನದಲ್ಲಿ ಕಳೆದ ಕೃಷ್ಣ ತನ್ನ 10ನೇ ವರ್ಷ ಪ್ರಾಯದಲ್ಲಿ ಮಾವ ಕಂಸನನ್ನು ಮಥುರಾದಲ್ಲಿ ಸಂಹಾರ ಮಾಡಿದ. ತಂದೆ- ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ ಕೃಷ್ಣ ಅಲ್ಲಿಂದ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂದಿರುಗಲಿಲ್ಲ.

್ಝಳಿದು ಹೋಗಿದ್ದ ದ್ವಾರಕಾ ನಗರವನ್ನು ಮತ್ತೆ ಕಟ್ಟಿದ. ಅಲ್ಲಿಂದ ಸಾಂದೀಪನಿ ಆಶ್ರಮಕ್ಕೆ ಬಂದು ತನ್ನ 18ನೇ ವರ್ಷದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ.

ವಿದ್ಯಾಭ್ಯಾಸದ ಬಳಿಕ ಪಾಂಡವರ ದುರಂತದ ಬಗ್ಗೆ ಕೃಷ್ಣನಿಗೆ ತಿಳಿಯುತ್ತದೆ. ಇಂದ್ರಪ್ರಸ್ಥ ರಾಜಧಾನಿಯನ್ನು ಕಟ್ಟಲು ಪಾಂಡವರಿಗೆ ಸಹಾಯ ಮಾಡುತ್ತಾನೆ. ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು. ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಮಹಾನ್ ಸಾಲುಗಳೇ ಭಗವದ್ಗೀತೆ.

ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ, ಧರ್ಮದ ರಕ್ಷಣೆ ಮಾಡುತ್ತಾನೆ. ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣ ವೈಕುಂಠಕ್ಕೆ ಮರಳಿದ. ಮುಂದಿನ ದಿನದಲ್ಲಿ ತಾನು ಕಟ್ಟಿದ ನಗರ ದ್ವಾರಕೆ ಮುಳುಗುವುದನ್ನು ನೋಡಬೇಕಾಯಿತು. ಕೃಷ್ಣನು ಲೋಕಕಂಟಕರಾದ ಚನೋರ, ಕಂಸ, ಶಿಶುಪಾಲ, ದಂತವಕ್ರ ಎಂಬ 4 ಜನರನ್ನು ಮಾತ್ರ ಸಂಹಾರ ಮಾಡಿದ.

ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಜೀವಿಸಿದ್ದ. 18 ಫೆಬ್ರವರಿ ಕ್ರಿಪೂ 3102ರಲ್ಲಿ ಜಾರಾ ಎನ್ನುವ ಬೇಟೆಗಾರನ ಬಾಣದಿಂದ ಅವತಾರ ಸಮಾಪ್ತಗೊಳಿಸಿದ.

ಕೃಷ್ಣನ ಪರಿವಾರ: ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ. ಕೃಷ್ಣನ ತಂದೆ ವಸುದೇವ, ತಾಯಿ ದೇವಕಿ. ಸಾಕು ತಂದೆ ನಂದ, ಸಾಕು ತಾಯಿ ಯಶೋದೆ. ಹಿರಿಯಣ್ಣ ಬಲರಾಮ, ತಂಗಿ ಸುಭದ್ರೆ. ಪತ್ನಿಯರು ರುಕ್ಮಿಣಿ ಮತ್ತು ಸತ್ಯಭಾಮ.

| ಹನುಮಂತ.ಮ.ದೇಶಕುಲಕರ್ಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net