18 ಸಾವಿರ ಬೋಗಸ್ ಕಂಪನಿ!

ವಿಜಯವಾಣಿ (20)
Published on

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಅಡಿಯಲ್ಲಿ ದೇಶಾದ್ಯಂತ ಸುಮಾರು 18 ಸಾವಿರ ನಕಲಿ ಕಂಪನಿಗಳು ನೋಂದಣಿಯಾಗಿದ್ದು, ಅವು ಸುಮಾರು 25 ಸಾವಿರ ಕೋಟಿ ರೂ. ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಬೋಗಸ್ ಕಂಪನಿಗಳ ಪತ್ತೆಗೆ ರಾಷ್ಟ್ರಮಟ್ಟದಲ್ಲಿ ನಡೆದ ಅಭಿಯಾನ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಯಾವುದೇ ವಸ್ತುಗಳ ಮಾರಾಟ ಮಾಡದಿದ್ದರೂ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು ಸರ್ಕಾರದ ಬೊಕ್ಕಸಕ್ಕೆ ವಂಚಿಸುವ ಉದ್ದೇಶದಿಂದಲೇ 73 ಸಾವಿರ ಜಿಎಸ್​ಟಿ ಐಡೆಂಟಿಫಿಕೇಶನ್ ನಂಬರ್​ಗಳು (ಜಿಎಸ್​ಟಿಐಎನ್) ರೂಪುಗೊಂಡಿದ್ದನ್ನು ಗುರುತಿಸಲಾಗಿತ್ತು. ಆ ಪೈಕಿ 18 ಸಾವಿರ ಕಂಪನಿಗಳು ಅಸ್ತಿತ್ವದಲ್ಲೇ ಇಲ್ಲದಿರುವುದು ಮತ್ತು ಅವುಗಳಿಂದ 24,550 ಕೋಟಿ ರೂ. ತೆರಿಗೆ ವಂಚನೆಯಾಗಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ.16ರಿಂದ ಅಕ್ಟೋಬರ್ ಅಂತ್ಯದವರೆಗೆ ನಡೆದ ಈ ಎರಡನೇ ವಿಶೇಷ ಅಭಿಯಾನದಲ್ಲಿ ಸ್ವಇಚ್ಛೆಯಿಂದ ಸುಮಾರು 70 ಕೋಟಿ ರೂ. ಜಿಎಸ್​ಟಿಯನ್ನು ಕಂಪನಿಗಳು ಪಾವತಿ ಮಾಡಿವೆ. ನಕಲಿ ಜಿಎಸ್​ಟಿ ನೋಂದಣಿ ಪ್ರಕರಣಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸುತ್ತಿದೆ. ಈ ಹಿಂದೆ 2023ರ ಮೇ 16ರಿಂದ ಜು. 15ರವರೆಗೆ ನಡೆದಿದ್ದ ಪ್ರಥಮ ವಿಶೇಷ ಅಭಿಯಾನದಲ್ಲಿ 21,791 ಬೋಗಸ್ ಕಂಪನಿಗಳು 24,010 ಕೋಟಿ ರೂ. ಜಿಎಸ್​ಟಿ ವಂಚನೆ ಆಗಿರುವುದು ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net