

ಬೆಂಗಳೂರು: 2025-26ನೇ ಸಾಲಿನ ಪಿಎಂಶ್ರೀ ಯೋಜನೆಯನ್ನು ಅನುಷ್ಠಾನ ಮಾಡಲು ಮೊದಲ ಕಂತಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ 188.46 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಕೇಂದ್ರದ ಪಾಲು 113.07 ಕೋಟಿ ರೂ. ಹಾಗೂ ರಾಜ್ಯದ 75.38 ಕೋಟಿ ರೂ. ಸೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಆದೇಶದಲ್ಲಿ ವಿಧಿಸಲಾಗಿರುವ ಎಲ್ಲ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಿಎಂಶ್ರೀ ಯೋಜನೆಗೆ ಸಂಬಂಧಿಸಿದ 2025-26ನೇ ಸಾಲಿನ ಯೋಜನಾ ಅನುಮೋದನಾ ಮಂಡಳಿ(ಪಿಎಬಿ) ಸಭಾ ನಡಾವಳಿಯನ್ನು ರಾಜ್ಯ ಯೋಜನಾ ನಿರ್ದೇಶಕರು ಕಡ್ಡಾಯವಾಗಿ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
ಶಾಲಾ ಹಂತದಲ್ಲಿ ಕೈಗೊಳ್ಳಬೇಕಾಗಿರುವ ಚಟುವಟಿಕೆವಾರು ಅನುದಾನ ಬಳಕೆಯ ಕ್ರಮಗಳ ಕುರಿತು ವಿಸ್ತೃತವಾದ ಮಾರ್ಗಸೂಚಿಯನ್ನು ಹೊರಡಿಸಬೇಕು. ಶಾಲಾವಾರು ಬಿಡುಗಡೆಮಾಡಲಾಗುವ ಚಟುವಟಿಕೆ ಸಂಬಂಧಿಸಿದಂತೆ ಶಾಲಾವಾರು ಅನುದಾನದ ಮಾಹಿತಿಯನ್ನು ಶಾಲೆಗಳ ಯುಡೈಸ್ ಕೋಡ್‌ನಲ್ಲಿ ಕಡ್ಡಾಯವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಅನುದಾನ ಬಿಡುಗಡೆ ಮಾಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶದಲ್ಲಿ ತಿಳಿಸಿದೆ.