

ಒಟ್ಟಾವ: ಕರೊನಾ ಲಾಕ್ಡೌನ್ನಿಂದಾಗಿ ವಿಶ್ವದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಖಾಲಿ ಖಾಲಿಯಾಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆನಡಾ ಯುವಕನೊಬ್ಬ ಅಪಾಯಾಕಾರಿ ವೇಗದಲ್ಲಿ ಕಾರು ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಕೆನಡಾದ ಒಂಟಾರಿಯೋ ಪ್ರಾಂತ್ಯದ ಕ್ವೀನ್ ಎಲಿಜಬೆತ್ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ನಿಗದಿಗಿಂತ ಮೂರುಪಟ್ಟು ವೇಗದಲ್ಲಿ ಕಾರು ಚಾಲನೆ ಮಾಡಿದ್ದಕ್ಕೆ 18 ವರ್ಷದ ಯುವಕನ ಮೇಲೆ ಅಪಾಯಕಾರಿ ಚಾಲನೆ, ಸ್ಟ್ರೀಟ್ ರೇಸಿಂಗ್ ಅಥವಾ ಸ್ಟಂಟ್ ಡ್ರೈವಿಂಗ್ ಕೇಸ್ಗಳು ದಾಖಲಾಗಿವೆ.
ಕಾರು ತಡೆದು ಪರಿಶೀಲಿಸಿದ ಒಂಟಾರಿಯೋ ಪ್ರಾಂತ್ಯದ ಪೊಲೀಸರಿಗೆ ಯುವಕ ಗಂಟೆಗೆ ಬರೋಬ್ಬರಿ 308 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿರುವುದು ಗೊತ್ತಾಗಿದೆ. ಆದರೆ, ವೇಗದ ಮಿತಿ ಇರುವುದು 110 ಕಿ.ಮೀ ಮಾತ್ರ.
ಯುವಕನನ್ನು ನೊಹಾ ಲೌರಿಸೆಲ್ಲಾ ಎಂದು ಗುರುತಿಸಲಾಗಿದ್ದು, ತಂದೆಯ ಮರ್ಸಿಡೆಸ್ ಸಿ63 ಎಎಂಜಿ ಕಾರನ್ನು ಚಲಾಯಿಸಿರುವುದು ತಿಳಿದುಬಂದಿದೆ. ಕಾರಿನಲ್ಲಿ ಚಾಲಕನ ವಯಸ್ಸಿನ ಮತ್ತೊಬ್ಬ ಯುವಕನಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿರುವುದಲ್ಲದೇ, 7 ದಿನಗಳವರೆಗೆ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದು ಮಾಡಲಾಗಿದೆ. (ಏಜೆನ್ಸೀಸ್)