

ನವದೆಹಲಿ: ಬಂಡುಕೋರರು ಹಾಗೂ ಸೈನಿಕರ ನಡುವಿನ ಗುಂಡಿನ ಚಕಮಕಿಯಲ್ಲಿ 41 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ 18 ಮಂದಿ ಸೈನಿಕರು, 23 ಮಂದಿ ಬಂಡುಕೋರರು ಮೃತಪಟ್ಟಿದ್ದು, ಈ ಬಗ್ಗೆ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಕಲಾತ್‌ನ ಪ್ರಮುಖ ಹೆದ್ದಾರಿಯಲ್ಲಿ ಬ್ಯಾರಿಕೇಡ್ಗಳನ್ನು ಬೇದಿಸಿ ನುಗ್ಗಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 18 ಸೈನಿಕರು ಮೃತಪಟ್ಟಿದ್ದಾರೆ. 23 ಬಂಡುಕೋರರು ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದು, ಭದ್ರತಾ ಪಡೆಗಳು ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಡುಕೋರರ ದಾಳಿಗಳನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಬಲೂಚಿಸ್ತಾನದ ಪ್ರಾಂತೀಯ ನಾಯಕರು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದಕ್ಕೆ ಸೇನೆಯನ್ನು ಶ್ಲಾಘಿಸಿದ್ದು, ಮೃತ ಸೈನಿಕರಿಗೆ ಸಂತಾಪವನ್ನು ಸೂಚಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಶುರುವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಈ ರೀತಿಯ ಘಟನೆ ನಡೆದಿದ್ದು, ತಂಡಗಳನ್ನು ಚಿಂತೆಗೆ ದೂಡಿದೆ. 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸುತ್ತಿದ್ದು, ಈ ಬೆಳವಣಿಗೆ ಮುಳುವಾಗುವ ಸಾಧ್ಯತೆ ಇದೆ.