ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಹೆಚ್ಚಾಯ್ತು ತಲೆಬಿಸಿ! ನಿರ್ವಹಣಾ ವೆಚ್ಚಕ್ಕೆ 18% GST, ಹೀಗಿದೆ ವರದಿ

ವಿಜಯವಾಣಿ - 2025-04-13T174804.962
Published on

GST: ಈಗಾಗಲೇ ಹಾಲಿನ ದರ, ಡಿಸೇಲ್​ ದರ ಹೆಚ್ಚಳದಿಂದ ಕಂಗಾಲಾಗಿರುವ ರಾಜ್ಯದ ನಿವಾಸಿಗಳು, ರಾಜ್ಯ ಸರ್ಕಾರದ ತೆರಿಗೆ ಏರಿಕೆಯಿಂದ ಕೆಂಡಾಮಂಡಲಗೊಂಡಿದ್ದಾರೆ. ಇದೆಲ್ಲದರ ಮಧ್ಯೆ ಈಗ ಅಪಾರ್ಟೆಮೆಂಟ್​ ನಿವಾಸಿಗಳಿಗೆ ಮತ್ತೊಂದು ಶಾಕ್​ ಎದುರಾಗಿದ್ದು, ನಗರ ಪ್ರದೇಶಗಳಲ್ಲಿನ ಅಪಾರ್ಟ್​ಮೆಂಟ್​​ನ ಮಾಸಿಕ ನಿರ್ವಹಣೆಯ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲು ಸರ್ಕಾರ ಚಿಂತಿಸಿದ್ದು, ವಸತಿ ಸಮುಚ್ಚಯ ಸಂಘ ಮೇಲೆ ಒತ್ತಾಯ ಹೇರಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ರಾಜಧಾನಿ ಮಾತ್ರವಲ್ಲದೇ ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ನಗರಗಳಲ್ಲಿ ಕನಿಷ್ಠ 40 ಲಕ್ಷಕ್ಕೂ ಹೆಚ್ಚು ಮಂದಿ ಇಂತಹ ಬೃಹತ್​ ಅಪಾರ್ಟ್​​ಮೆಂಟ್​ಗಳಲ್ಲಿ ವಾಸವಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗಿರುವಾಗ ಅಪಾರ್ಟ್‌ಮೆಂಟ್‌ಗೆ ವಿಧಿಸಲಾಗುವ ಮಾಸಿಕ ನಿರ್ವಹಣೆಯಲ್ಲಿ 7,500 ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಇಲ್ಲ ಸೊಸೈಟಿಯ ಒಟ್ಟು ವಾರ್ಷಿಕ ಸಂಗ್ರಹ 20 ಲಕ್ಷ ರೂ. ಮೀರಿದರೆ, ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

ಫ್ಲಾಟ್​, ಕಟ್ಟಡಕ್ಕೆ ಬಣ್ಣ ಬಳಿಯುವುದು ಅಥವಾ ಲಿಫ್ಟ್ ಬದಲಾಯಿಸುವಂತಹ ಸಾಂದರ್ಭಿಕ ವೆಚ್ಚಗಳಿಗಾಗಿ ಸೊಸೈಟಿ ಹಣಕಾಸು ವರ್ಷದಲ್ಲಿ 20 ಲಕ್ಷ ರೂ. ಸಂಗ್ರಹಿಸಿದರೂ ಅದು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ. ಈ ಸಂಗತಿ ತಿಳಿದ ಅಪಾರ್ಟ್‌ಮೆಂಟ್ ನಿವಾಸಿಗಳು ಆತಂಕಗೊಂಡಿದ್ದು, ನಿರ್ವಹಣಾ ಜಿಎಸ್​ಟಿ ವಿಷಯಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಸೇರಿದಂತೆ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ತಾವು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕೇ ಎಂಬುದರ ಕುರಿತು ಸಭೆಗಳನ್ನು ನಡೆಸುತ್ತಿದ್ದಾರೆ.

ಜಿಎಸ್‌ಟಿ ದರಗಳ ಬಗ್ಗೆಯೂ ಗೊಂದಲ ಹೆಚ್ಚುತ್ತಿದೆ. ಹಲವರು ಇದು ಶೇ. 5ರಷ್ಟು ಎಂದು ಊಹಿಸಿದ್ದಾರೆ. ಆದರೆ, ವಾಸ್ತವದಲ್ಲಿ ಅದು ಶೇ. 18ರಷ್ಟಿದೆ. ಅಂದರೆ 20 ಲಕ್ಷ ರೂ.ಗಳನ್ನು ತಲುಪುವ ಪ್ರತಿಯೊಂದು ಅಪಾರ್ಟ್‌ಮೆಂಟ್ ಸಂಕೀರ್ಣವು ವಾರ್ಷಿಕವಾಗಿ 3.6 ಲಕ್ಷ ರೂ. ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇದು 10 ವರ್ಷಗಳಲ್ಲಿ 36 ಲಕ್ಷ ರೂ.ವರೆಗೆ ಹೆಚ್ಚಾಗುತ್ತದೆ. ಇದಕ್ಕೆ ಅನುಸರಣೆ ಹೊರೆ ಸೇರಿಸಿ, ಅಂದರೆ ರಿಟರ್ನ್ಸ್ ಮತ್ತು ಇತರ ಶಾಸನಬದ್ಧ ಅನುಸರಣೆಗಳನ್ನು ಸಲ್ಲಿಸಲು ಆಡಿಟರ್‌ಗೆ 1ರಿಂದ 2 ಲಕ್ಷ ರೂ.ನಷ್ಟು ಹೊರೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net