

ಶಿವಮೊಗ್ಗ: ಅನ್ನ ದೇವರ ಮುಂದೆ ಇನ್ನು ದೇವರು ಇಲ್ಲ ಎನ್ನುವ ಸರ್ವಜ್ಞರ ಕವಿವಾಣಿಯಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ 10 ಅಕ್ಕಿ ಬದಲಿಗೆ 5 ಮಾತ್ರ ವಿತರಿಸುತ್ತಿದ್ದು ನಿರೀಕ್ಷೆಗೆ ತಕ್ಕಂತೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ಫಲಾನುಭವಿಗಳ ಖಾತೆಗೆ ಐದು ಕೆಜಿ ಅಕ್ಕಿ ಬದಲು ತಲಾ 170 ರೂ. ಜಮೆ ಮಾಡುತ್ತಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ 3.25 ಕಾರ್ಡ್‌ಗಳ ಕುಟುಂಬದ 11.45 ಲಕ್ಷ ಸದಸ್ಯರಿಗೆ 18.49 ಕೋಟಿ ರೂ. ಜಮೆ ಆಗಿದೆ.
ಜಿಲ್ಲೆಯಲ್ಲಿ 3,08,429 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಜುಲೈ ತಿಂಗಳಲ್ಲಿ 5 ಅಕ್ಕಿ ಜತೆಗೆ 10,03,264 ಸದಸ್ಯರಿಗೆ 17,46,73,810 ರೂ. ಜಮೆ ನೀಡಲಾಗಿತ್ತು. ಆಗಸ್ಟ್‌ನಲ್ಲಿ ಕಾರ್ಡ್‌ದಾರರ ಪ್ರಮಾಣ (ತಿದ್ದುಪಡಿಗೆ ಅವಕಾಶವಿರುವ ಕಾರಣ)ಕೊಂಚ ಹೆಚ್ಚಾಗಿದ್ದು 3,25,156 ಕಾರ್ಡ್‌ಗಳ ಕುಟುಂಬದ 11,45,683 ಸದಸ್ಯರಿಗೆ 18,49,56,430 ರೂ. ಜಮೆ ಮಾಡಿದ್ದು ಯೋಜನೆಗೆ ಎಲ್ಲೆಡೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.
ಆಹಾರ ಭದ್ರತಾ ಯೋಜನೆಯಡಿ ಪ್ರತಿಯೊಬ್ಬ ಪಡಿತರದಾರನಿಗೆ ತಲಾ 10 ಕೆಜಿ ಅಕ್ಕಿ ಒದಗಿಸುವ ಯೋಜನೆಯ ಉದ್ದೇಶ. ಆದರೆ ಪ್ರಸ್ತುತ ಹೆಚ್ಚುವರಿ ಅಕ್ಕಿಯ ಅಲಭ್ಯತೆಯ ಹೊರತಾಗಿಯೂ ಸರ್ಕಾರ ಕೈಚೆಲ್ಲಿ ಕುಳಿತಿಲ್ಲ. ಜನರಿಗೆ ನೀಡದ ವಾಗ್ದಾನದಂತೆ ಬಿಪಿಎಲ್ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿಯ ಬದಲಾಗಿ ತಲಾ 170 ರೂ. ಅನ್ನು ಕುಟುಂಬದ ಯಜಮಾನಿಯ ಖಾತೆಗೆ ಹಾಕುವ ಕ್ರಾಂತಿಕಾರಕ ಕ್ರಮಕ್ಕೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ.
ಕೇಂದ್ರ ಕೈಚೆಲ್ಲಿದ್ದಕ್ಕೆ ದುಡ್ಡು: ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಕುಟುಂಬ ಪಡಿತರ ಚೀಟಿಗಳು ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಿತರಿಸಲಾಗಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಈ ಯೋಜನೆ ಅನ್ವಯ. ಸರ್ಕಾರ ರಚನೆಯಾದ ನಂತರ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ 5 ಕೆಜಿ ಅಕ್ಕಿ ನೀಡಲು ಸಿದ್ಧತೆ ನಡೆಸಲಾಯಿತು. ಆದರೆ ರಾಜ್ಯದಲ್ಲಿ ಅಷ್ಟೊಂದು ಅಕ್ಕಿ ದಾಸ್ತಾನು ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಪ್ರಯತ್ನ ನಡೆಸಿತು. ಕೇಂದ್ರ ಸರ್ಕಾರ ಅಕ್ಕಿ ನೀಡಲು ಸಾಧ್ಯವಿಲ್ಲವೆಂದಾಗ ಫಲಾನುಭವಿಗಳಿಗೆ ನಗದು ನೀಡಲು ನಿರ್ಧರಿಸಿತು.
ಆ.28ಕ್ಕೆ ಸರ್ಕಾರ ಶತದಿನ ಪೂರೈಕೆ
ನೆಮ್ಮದಿಯ ಬದುಕಿಗೆ ಆಹಾರ ಭದ್ರತೆ ಅನ್ನಭಾಗ್ಯ ಎನ್ನುವ ಘೋಷವಾಕ್ಯದೊಂದಿಗೆ ಜು.10ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಅನ್ನಭಾಗ್ಯ ಯೋಜನೆಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಾಯಿತು. ಆ.28ಕ್ಕೆ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಲಿದೆ. ಸರ್ಕಾರದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು ಅತ್ಯುತ್ತಮ ಸ್ಪಂದನೆ ಮತ್ತು ಪ್ರತಿಕ್ರಿಯೆ ಜನರಿಂದ ಲಭ್ಯವಾಗಿದೆ.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ದೂರುಗಳಿದ್ದರೆ ಉಚಿತ ಸಹಾಯವಾಣಿ ಸಂಖ್ಯೆ 1967 ಹಾಗೂ 18004259339ಕ್ಕೆ ಕರೆ ಮಾಡಬಹುದು. ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ನಿರ್ದಿಷ್ಟ ದಿನಾಂಕದಂದು ಅನ್ನಭಾಗ್ಯ ಅದಾಲತ್ ನಡೆಸಲಾಗುತ್ತದೆ.
ಆರ್.ಅವಿನ್
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ