

ರಾಯ್ಪುರ: ಬಸ್ತರ್ ಜಿಲ್ಲೆಯ ಸುಕ್ಮಾದಲ್ಲಿ ನಕ್ಸಲರು ಮತ್ತು ಭದ್ರತಾಪಡೆಗಳ ಮಧ್ಯೆ ಶನಿವಾರ ನಡೆದ ಗುಂಡಿನ ಚಕಮಕಿ ವೇಳೆ ನಾಪತ್ತೆಯಾಗಿದ್ದ 17 ಯೋಧರು ಹುತಾತ್ಮರಾಗಿದ್ದು, ಅವರ ಶವ ಭಾನುವಾರ ಪತ್ತೆಯಾಗಿದೆ. ಮೃತರಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಡಿಆರ್ಜಿಗೆ ಸೇರಿದ 12 ಮತ್ತು ಎಸ್ಟಿಎಫ್ನ 5 ಮಂದಿ ಸೇರಿದ್ದಾರೆ. ಮಾವೋವಾದಿಗಳ ಪ್ರಮುಖ ನಾಲ್ಕೈದು ಮುಖಂಡರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಎಸ್ಟಿಎಫ್, ಸಿಆರ್ಪಿಎಫ್ನ ಕೋಬ್ರಾ ಘಟಕ ಮತ್ತು ರಾಜ್ಯ ಪೊಲೀಸ್ನ ಡಿಆರ್ಜಿ ಸಿಬ್ಬಂದಿ ಒಳಗೊಂಡ ಜಂಟಿ ತಂಡದ 150 ಯೋಧರು ಖಚಿತ ಮಾಹಿತಿ ಮೇರೆಗೆ ಎಲಮಾಗುಂಡಾ ಬಳಿಯ ಅರಣ್ಯ ಪ್ರದೇಶದಲ್ಲಿ ಶನಿವಾರ ಶೋಧ ಕಾರ್ಯದಲ್ಲಿ ತೊಡಗಿದ್ದರು. ಆಗ ಕೊರಜ್ಗುಡದಲ್ಲಿ ಬೆಟ್ಟದಲ್ಲಿ ಅಡಗಿದ್ದ 250 ನಕ್ಸಲರಿದ್ದ ಗುಂಪು ಹೊಂಚುಹಾಕಿ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಭದ್ರತಾಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ 30ಕ್ಕೂ ಯೋಧರು ಗಾಯಗೊಂಡು ಕಣ್ಮರೆಯಾದರು. ಶನಿವಾರ ರಾತ್ರಿಯೇ 15 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, 17 ಮಂದಿ ಪತ್ತೆಯಾಗಲಿಲ್ಲ. ಈ ಯೋಧರ ಶವ ಭಾನುವಾರ ದೊರೆಯಿತು ಎಂದು ಬಸ್ತರ್ ವಲಯದ ಐಜಿಪಿ ಪಿ.ಸುಂದರ್ರಾಜ್ ತಿಳಿಸಿದ್ದಾರೆ.
ಈ ದಾಳಿಯನ್ನು ಹಿದ್ಮಾ ನೇತೃತ್ವದ ಸಿಪಿಐ(ಮಾವೋವಾದಿ) ಬಟಾಲಿಯನ್ 1ರ ನಕ್ಸಲರು ತಂಡ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಹೇಗಾಯಿತು ಎನ್ಕೌಂಟರ್?
ದಾಳಿ ನಡೆದ ಪ್ರದೇಶದಲ್ಲಿ ತೆಲಂಗಾಣದ ಮಾವೋವಾದಿಗಳ ಮುಖಂಡರ ಚಲನವಲನ ಸಾಮಾನ್ಯವಾಗಿ ಇರುತ್ತದೆ. ಆದರೆ, ಈ ಸಾರಿ ನಕ್ಸಲರ ಬೃಹತ್ ಗುಂಪೊಂದು ಬೀಡುಬಿಟ್ಟರುವ ವರದಿ ಗುಪ್ತಚರ ದಳದಿಂದ ದೊರಕಿತು. ಹೀಗಾಗಿ ಜಂಟಿ ತಂಡದ 150 ಮಂದಿ ಐದು ಭಾಗಗಳಾಗಿ ಶೋಧ ಕಾರ್ಯಾಚರಣೆಗೆ ಇಳಿದರು ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಂಟಿ ತಂಡ ಶೋಧನಾ ಕಾರ್ಯದ ಬಗ್ಗೆ ನಕ್ಸಲರಿಗೆ ಸುಳಿವು ದೊರೆತು, ಅವರು ಹೆಚ್ಚು ಜಾಗೃತರಾದರು. ಜಂಟಿ ತಂಡದ ಮೊದಲ ಗುಂಪು ಕಾಸಲ್ಪಾಡ್ ಅರಣ್ಯದಲ್ಲಿ ಶೋಧಕಾರ್ಯ ನಡೆಸಿದಾಗ ನಕ್ಸಲರು ಅಥವಾ ದಾಳಿ ಎದುರಾಗಲಿಲ್ಲ. ಆದರೆ, ಕೊರಜ್ ಡೋಂಗ್ರಿ ಬಳಿ ನಕ್ಸಲರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿದರು. ಇದನ್ನು ಮಾವೋವಾದಿ ಗುಂಪಿನ ನೂತನ ಮುಖ್ಯಸ್ಥ ಬಸವರಾಜು ಸೂಚನೆ ಮೇಲೆ ನಡೆಸಲಾಗಿದೆ ಎನ್ನಲಾಗಿದೆ. ದಾಳಿಯ ವಾರ್ತೆ ತಿಳಿಯುತ್ತಿದ್ದಂತೆ ಸಿಆರ್ಪಿಎಫ್ನ ಒಂದು ತುಕಡಿಯನ್ನು ಯೋಧರ ರಕ್ಷಣೆಗಾಗಿ ಕಳುಹಿಸಲಾಯಿತು ಎಂದು ಹೇಳಿದ್ದಾರೆ.
15 ಗನ್ ಕೊಳ್ಳೆ ಹೊಡೆದ ನಕ್ಸಲರು
ಗಾಯಗೊಂಡ ಯೋಧರಿಂದ 15 ಗನ್ಗಳನ್ನು ನಕ್ಸಲರ ಗುಂಪು ಕಸಿದುಕೊಂಡಿದೆ. ಇದರಲ್ಲಿ 12 ಎಕೆ 47 ರೈಫಲ್ಸ್, ತಲಾ ಒಂದು ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್, ಐಎನ್ಎಸ್ಎಸ್ ರೈಫಲ್ ಮತ್ತು ಎಕ್ಸಾಲಿಬರ್ ರೈಫಲ್ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನಡೆದ ನಕ್ಸಲರ ಭೀಕರ ದಾಳಿ
2008ರ ಫೆಬ್ರವರಿ- ಒಡಿಶಾದ ನಯಾಗಢದಲ್ಲಿನ ದಾಳಿಯಿಂದ 14 ಪೊಲೀಸರು ಸೇರಿ 15 ಮಂದಿ ಸಾವು.
2009 ಮಾರ್ಚ್- ಮಹಾರಾಷ್ಟ್ರದ ಪುಷ್ತೋಲಾ ಜಿಲ್ಲೆಯಲ್ಲಿ ನೆಲಬಾಂಬ್ ಸ್ಪೋಟದಿಂದ ಸಿಆರ್ಪಿಎಫ್ನ 15 ಯೋಧರು ಹುತಾತ್ಮ.
2010 ಫೆಬ್ರವರಿ- ಪಶ್ಚಿಮ ಬಂಗಾಳದ ಸಿಲ್ಡಾದ ಅರೆಸೇನಾ ಪಡೆ ಶಿಬಿರದ ಮೇಲೆ ದಾಳಿಯಲ್ಲಿ 24 ಜನರ ಮರಣ.
2010 ಮೇ- ಕೋಲ್ಕತ-ಮುಂಬೈ ರೈಲು ಹಳಿತಪು್ಪವಂತೆ ಮಾಡಿದ್ದರಿಂದ 150 ಜನರ ಸಾವು
2010 ಮೇ- ಛತ್ತೀಸ್ಗಢದ ದಾಂತೇವಾಡದಲ್ಲಿ ಸಿಆರ್ಪಿಎಫ್ ಯೋಧರ ತುಕಡಿ ಮೇಲಿನ ದಾಳಿಯಲ್ಲಿ 76 ಮಂದಿ ಹುತಾತ್ಮ.
2011 ಮೇ- ಛತ್ತೀಸ್ಗಢದ ಗರಿಯಾಬಂದ್ ಜಿಲ್ಲೆಯಲ್ಲಿನ ಸೇತುವೆ ಸ್ಪೋಟದಿಂದ 10 ಪೊಲೀಸರು ಸೇರಿ 14 ಮಂದಿ ಸಾವು.
2012 ಜನವರಿ- ಜಾರ್ಖಂಡ್ನ ಗಢವಾ ಜಿಲ್ಲೆಯಲ್ಲಿ ದಾಳಿಗೆ 13 ಪೊಲೀಸರ ಮರಣ.
2013 ಮೇ- ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ದರ್ಭಾ ಕಣಿವೆಯಲ್ಲಿ ದಾಳಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ವಿ.ಸಿ.ಶುಕ್ಲಾ ಸೇರಿ 27 ಜನರ ಸಾವು
2017 ಏಪ್ರಿಲ್- ಛತ್ತೀಸ್ಗಢದ ಬಸ್ತರ್ ಜಿಲ್ಲೆಯ ಬುರಕಾಪಾಲ್ ದಾಳಿಯಲ್ಲಿ ಸಿಆರ್ಪಿಎಫ್ನ 25 ಯೋಧರು ಹುತಾತ್ಮ
2019 ಏಪ್ರಿಲ್- ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯ ನಕಲ್ನಗರದಲ್ಲಿ ಬಿಜೆಪಿ ಶಾಸಕ ಭೀಮಾ ಮಂಡವಿ ಹತ್ಯೆ.
ನಕ್ಸಲರ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಯೋಧರು 3 ತಾಸು ಪ್ರತಿದಾಳಿ ತೋರಿದರು. ಗುಂಡಿನ ಚಕಮಕಿಯಲ್ಲಿ 17 ಜನರು ಹುತಾತ್ಮರಾಗಿದ್ದು, 15 ಯೋಧರಿಗೆ ಗಾಯವಾಗಿದೆ. | ಪಿ.ಸುಂದರ್ರಾಜ್ ಬಸ್ತರ್ ವಲಯದ ಐಜಿಪಿ