

ನವದೆಹಲಿ: ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಈಗ ಬಹುತೇಕ ಮುಕ್ತಿ ಸಿಕ್ಕಿದ್ದರೂ ಅದರ ಪರಿಣಾಮಗಳಿಂದ ಇಲ್ಲವೇ, ಆ ಸೋಂಕಿನ ಬಳಿಕದ ಸಮಸ್ಯೆಗಳಿಂದ ಸಾಯುತ್ತಿರುವವರು ಕೂಡ ಬಹಳಷ್ಟಿದ್ದಾರೆ. ಇದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.
ಕೋವಿಡ್ ಸೋಂಕಿಗೆ ಒಳಗಾದವರ ಪೈಕಿ ಶೇ. 17.1 ಮಂದಿ ಅದರ ಸುದೀರ್ಘ ಪರಿಣಾಮದಿಂದ ಇಲ್ಲವೇ ಮತ್ತೆ ಹೊಸದಾಗಿ ಸೋಂಕಿಗೆ ಒಳಗಾಗಿ ಬಳಲುತ್ತಿದ್ದಾರೆ. ಹೀಗೆ ಕೋವಿಡ್ನ ಸುದೀರ್ಘ ಪರಿಣಾಮವು ಸುಸ್ತು, ಉಸಿರಾಟದ ಸಮಸ್ಯೆ ಅಥವಾ ನರಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ.
ಈ ಕರೋನೋತ್ತರ ಪರಿಸ್ಥಿತಿಯಲ್ಲಿ ಕೋವಿಡ್ನಿಂದ ಗುಣವಾಗಿ ಡಿಸ್ಚಾರ್ಜ್ ಆದಮೇಲೆ ಸಾಯುತ್ತಿರುವವ ಪ್ರಮಾಣದಲ್ಲಿ 2.7 ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಐಸಿಎಂಆರ್ನ ಕ್ಲಿನಿಕಲ್ ಸ್ಟಡೀಸ್ ಮತ್ತು ಟ್ರಯಲ್ಸ್ ಯುನಿಟ್ ಅಂಕಿ-ಅಂಶಗಳ ಪ್ರಕಾರ ಕೋವಿಡ್ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ. 6.5 ಮಂದಿ ಡಿಸ್ಚಾರ್ಜ್ ಆದ ಒಂದು ವರ್ಷದಲ್ಲಿ ಸಾವಿಗೀಡಾಗಿದ್ದಾರೆ.
ಮಕ್ಕಳು, ವೃದ್ಧರು, ಪುರುಷರು ಹಾಗೂ ಲಘು-ತೀವ್ರ ಸೋಂಕಿನವರು ಎಲ್ಲರೂ ಸೇರಿದಂತೆ ಒಟ್ಟು 31 ಆಸ್ಪತ್ರೆಗಳ 14,419 ರೋಗಿಗಳ ಅಂಕಿ-ಅಂಶಗಳನ್ನು ತಾಳೆ ಹಾಕಿ ಅಧ್ಯಯನ ಮಾಡಿ ಈ ಅಂಶವನ್ನು ಕಂಡುಕೊಳ್ಳಲಾಗಿದೆ.
ಇನ್ನೊಂದು ಅಂಕಿ-ಅಂಶದ ವಿಶ್ಲೇಷಣೆ ಪ್ರಕಾರ ಅಧ್ಯಯನಕ್ಕೆ ಒಳಪಟ್ಟ 18 ವರ್ಷದೊಳಗಿನ ರೋಗಿಗಳಲ್ಲಿ ಡಿಸ್ಚಾರ್ಜ್ ಆದಮೇಲೆ ಸಾಯುವ ಪ್ರಮಾಣ 1.7 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ. -ಏಜೆನ್ಸೀಸ್