16ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

9 kdr 4 rathostava
ಕಡೂರಿನ ದೊಡ್ಡಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕೆಂಚಾಂಬಿಕಾ ದೇವಾಲಯದ ಬಳಿ ರಥದ ಮನೆಯಿಂದ ತೇರನ್ನು ಹೊರಗೆ ಎಳೆದು ಪೂಜೆ ಸಲ್ಲಿಸಲಾಯಿತು. ಭರತ್ ಕೆಂಪರಾಜ್, ಚೇತನ್, ರಾಜು ಕರಿಬಡ್ಡೆ, ದೀಪು ಮತ್ತಿತರರಿದ್ದರು.
Published on

ಕಡೂರು: ದೊಡ್ಡಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಜೂ.16 ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಹನ್ನೆರಡು ಹರಿವಾಣದ ಗುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್‌ಕೆಂಪರಾಜ್ ಹೇಳಿದರು.

ಪಟ್ಟಣದ ಕೆಂಚಾಂಬಿಕಾ ದೇವಾಲಯದ ಬಳಿಯ ರಥದ ಬೀದಿಯಲ್ಲಿ ಸೋಮವಾರ ಜಾತ್ರಾ ಮಹೋತ್ಸವದ ಅಂಗವಾಗಿ ರಥದ ಮನೆಯಿಂದ ತೇರನ್ನು ಹೊರ ಎಳೆದು ಪೂಜೆ ಸಲ್ಲಿಸಿ ಮಾತನಾಡಿ, ಜೂ.10ರಿಂದ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತು 19ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 10ರಂದು ಕೆಂಚಮ್ಮ ದೇವಿಯ ಬಾನಸೇವೆ, 12ಕ್ಕೆ ಶ್ರೀ ಸ್ವಾಮಿಯ ಪುಣ್ಯ ಕಾರ್ಯ ನೆರವೇರಿಸಿ ಜಾಂಡೇವು ಬಾವುಟದ ಧ್ವಜಾರೋಹಣ ನೆರವೇರಿಸಲಾಗುತ್ತದೆ ಎಂದರು.

13ರಂದು ಹೊಳೆಪೂಜೆ ಮತ್ತು ಕೆಂಡಾರ್ಚನೆ ಸೇವೆ ನೆರವೇರಲಿದ್ದು 14ರ ಬೆಳಗ್ಗೆ ಶ್ರೀ ಸ್ವಾಮಿಯವರ ಸನ್ನಿಧಿಯಲ್ಲಿ ಪಂಚಬ್ರಹ್ಮ ಕಳಸಪೂಜೆ, ರಥದ ಕಳಸಾರೋಹಣ, ಸಂಜೆ 101 ಎಡೆಸೇವೆ ನಡೆಯಲಿದೆ. 15ರ ಸಂಜೆ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಮ್ಮ ದೇವಿಯ ಧಾರೆಮುಹೂರ್ತ ಕಾರ್ಯಕ್ರಮ ಜರುಗಲಿದೆ. 16 ರಂದು ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮಧ್ಯಾಹ್ನ 2ಕ್ಕೆ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಲಿದೆ. 17ಕ್ಕೆ ಕೆಂಚಾಂಬಿಕಾ ದೇವಿಗೆ ಮುತ್ತೈದೆ ಸೇವೆ, 18ಕ್ಕೆ ಶ್ರೀ ಕೆಂಚಮ್ಮ ದೇವಿಯ ಸಿಡಿಸೇವೆ, ಮಧ್ಯಾಹ್ನ ಓಕಳಿಸೇವೆ ಸಂಜೆ ಭಕ್ತಾದಿಗಳ ಮಡಲಕ್ಕಿ ಸೇವೆ ಇರುತ್ತದೆ. 19 ರಂದು ಶ್ರೀ ವೀರಭದ್ರಸ್ವಾಮಿಗೆ ಮಹಾರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದರು.

ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಚೇತನ್ ಲಕ್ಕಣ್ಣ , ದೀಪು ದೊಡ್ಡಿಬಿಂಗಿ, ರಾಜು ಕರಿಬಡ್ಡೆ, ಸತೀಶ್, ಚೇತನ್, ದೀಪು ದಳವಾಯಿ, ಗಗನ್, ರಾಕೇಶ್, ಅರ್ಚಕರಾದ ಆನಂದಯ್ಯ, ವಿಶ್ವನಾಥ್, ಮಲ್ಲಿಕಾರ್ಜುನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net