

ಶಿವಮೊಗ: ನಗರದ 165 ಕಡೆ ತುಂಗಾ ಚಾನಲ್ಗೆ ತ್ಯಾಜ್ಯ ಸೇರುತ್ತಿದೆ. ಅದರ ತಡೆಗೆ ಸಮಗ್ರ ಯೋಜನೆ ಆಗಬೇಕಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕರ್ತವ್ಯ ಭವನದಲ್ಲಿ ಮಂಗಳವಾರ ವಿಶೇಷ ಸಭೆ ನಡೆಸಿದ ಅವರು, ಗಾಡಿಕೊಪ್ಪದಿಂದ ಮುಂದೆ ಕೆರೆಗೆ ತ್ಯಾಜ್ಯ ಹೋಗುತ್ತಿದೆ. ಅದನ್ನು ತಪ್ಪಿಸಲು ನೀರಾವರಿ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಮಾರ್ಚ್ ಅಂತ್ಯದ ವೇಳೆಗೆ ಪ್ರಗತಿ ತೋರಿಸಬೇಕು. ಇಲ್ಲವಾದರೆ ಅರ್ಥ ಇಲ್ಲ. ಕೆಲವೆಡೆ ಆಸ್ಪತ್ರೆ ತ್ಯಾಜ್ಯ ಸೇರುತ್ತಿದೆ. ಇದು ಗಂಭೀರ ವಿಚಾರ. ಕೆಲಸದ ಭರವಸೆ ಆಗ ಕೊಟ್ಟು ಎರಡು ತಿಂಗಳಾಗಿದೆ. ಆದರೆ ಇನ್ನೂ ಯಾವುದೇ ಪ್ರಗತಿ ಕಂಡಿಲ್ಲ. ಹಾಗಾಗಿ ಕಾಲಮಿತಿಯಲ್ಲಿ ನದಿಗೆ ಕೊಳಚೆ ನೀರು ಹೋಗುವುದನ್ನು ತಕ್ಷಣಕ್ಕೆ ತಡೆಯಬೇಕಿದೆ. ಬೇರೆ ರಾಜ್ಯದವರಿಗೆ ಟೆಂಡರ್ ಕೊಟ್ಟರೆ ವಿಳಂಬ ಆಗುವ ಸಾಧ್ಯತೆಗಳಿರುವ ಕಾರಣ ಸ್ಥಳೀಯರಿಗೆ ನೀಡಿ ತ್ವರಿತವಾಗಿ ಕೆಲಸ ಮಾಡಿಸಬೇಕು ಎಂದರು.
ಸಾಮಾಜಿಕ ಹೋರಾಟಗಾರ ಎಸ್.ಬಿ.ಅಶೋಕ್ ಕುಮಾರ್ ಮಾತನಾಡಿ, ಇಡೀ ಆರ್‌ಎಂಎಲ್ನಗರ ಯುಜಿಡಿ ಸಂಪರ್ಕ ಆಗಿಲ್ಲ. ಯುಜಿಡಿ ಪೈಪ್ ಹಾಕಿಲ್ಲ. ರಸ್ತೆ ಮಾಡುವ ಮೊದಲು ಯುಜಿಡಿ ಪೈಪ್‌ಲೈನ್ ಮಾಡಬೇಕಿತ್ತು. ಈಗ ಮತ್ತೆ ರಸ್ತೆ ಮಾಡಬೇಕು. ಸಾರ್ವಜನಿಕ ತೆರಿಗೆ ಹಣ ವ್ಯರ್ಥ ಆಗುತ್ತದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್ ಮಾತನಾಡಿ, ಅನುಷ್ಠಾನ ಆಗಿರುವ ಕಾಮಗಾರಿ ಚಾಲನೆ ಯಾವಾಗ?, ಹತ್ತು ವೆಟ್‌ವೆಲ್ ಚಾಲನೆ ಯಾವಾಗ? 30 ವರ್ಷದಿಂದ ನೋಡುತ್ತಿದ್ದೇವೆ. ಯಾವ ಬಡಾವಣೆ ಯುಜಿಡಿ ಸಂಪರ್ಕ ಆಗಿಲ್ಲ? ಮ್ಯಾಪಿಂಗ್ ಮಾಡಿ, ಸಮಯ ನಿಗದಿಗೊಳಿಸಬೇಕು. ಡಿಸಿ ಜತೆ 15 ಸಭೆ ಆಗಿದೆ. ಗುಂಡಪ್ಪ ಶೆಡ್ ವೆಟ್‌ವೆಲ್ ಮಹತ್ವದ್ದು. ಅದೇ ಕಾರ್ಯ ನಿರ್ವಹಣೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.