

ಗಿಲ್ಗಿಟ್: ಇದ್ದಕ್ಕಿದ್ದಂತೆ ಭೂಕುಸಿತ ಸಂಭವಿಸಿದ್ದರಿಂದ, ಬಸ್ನಲ್ಲಿದ್ದ ಹದಿನಾರು ಜನರಿಗೆ ಅದು ಅವರ ಜೀವನದ ಕೊನೆಯ ಪ್ರಯಾಣವಾಗಿ ಪರಿಣಮಿಸಿದೆ. ಇಂಥದ್ದೊಂದು ಘೋರ ದುರಂತ ಶನಿವಾರ ತಡರಾತ್ರಿ ಸಂಭವಿಸಿದೆ.
ಬಸ್ಸನ್ನು ಆವರಿಸಿಕೊಂಡಿರುವ ಮಣ್ಣನ್ನು ತೆರವುಗೊಳಿಸಲಾಗಿದ್ದು, ಹದಿನಾರು ಜನರ ಶವಗಳನ್ನು ಹೊರತೆಗೆಯಲಾಗಿದೆ. ಆ ಪೈಕಿ ಚಾಲಕ-ನಿರ್ವಾಹಕ ಸೇರಿ ಆರು ಮಂದಿಯ ವಿವರಗಳು ಪತ್ತೆಯಾಗಿವೆ. ಉಳಿದ ಹತ್ತು ಜನರ ಕುರಿತ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಬಲ್ಟಿಸ್ತಾನ್-ಗಿಲ್ಗಿಟ್ ಪ್ರದೇಶದ ಜಗ್ಲೋಟ್- ಸ್ಕರ್ದು ರಸ್ತೆಯಲ್ಲಿ ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ರಾವಲ್ಪಿಂಡಿಯಿಂದ ಹೊರಟಿದ್ದ ಈ ಬಸ್ನಲ್ಲಿ ಅವಘಡ ಸಂಭವಿಸುವ ಮುನ್ನ 18 ಪ್ರಯಾಣಿಕರಿದ್ದು, ಆ ಪೈಕಿ ಇಬ್ಬರು ಅವರ ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಎಲ್ಲ ಶವಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)