

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಮಾರ್ಟ್ ಮೀಟರ್ ಹೆಸರಲ್ಲಿ 15 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ(15,500 crore scam in the name of smart meters) ನಡೆಸಿದೆ. ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ, ಟೆಂಡರ್ ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಆರೋಪಿಸಿದರು.
ಜೆ.ಪಿ. ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್ ಮೀಟರ್ ಹಗರಣದಿಂದ ರಾಜ್ಯದ ಪ್ರತಿಯೊಬ್ಬ ಗ್ರಾಹಕನ ಮೇಲೆ 8,520 ರೂ. ಹೊರೆ ಬೀಳಲಿದೆ. ಟೆಂಡರ್ ಪ್ರಕ್ರಿಯೆ ರದ್ದು ಮಾಡಿ ಪಾರದರ್ಶಕವಾಗಿ ಮರು ಟೆಂಡರ್ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್‌ಗೆ ಸಬ್ಸಿಡಿ ಕೊಡುತ್ತಿದೆ. ಈಗಾಗಲೇ ದೇಶದಲ್ಲಿ 19 ಕೋಟಿಯಷ್ಟು ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಕೇರಳ, ಯುಪಿ, ಗುಜರಾತ್, ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್‌ಗೆ 900 ರೂ. ಮಾತ್ರ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೀಟರ್‌ಗೆ 4,998 ರೂ. ಫಿಕ್ಸ್ ಮಾಡಿದ್ದಾರೆ. 2 ಫೇಸ್ ಮೀಟರ್‌ಗೆ 9,000 ರೂ. 3 ಫೇಸ್ ಮೀಟರ್‌ಗೆ 28,000 ಫಿಕ್ಸ್ ಮಾಡಿದ್ದಾರೆ. ನಿರ್ವಹಣೆ ವೆಚ್ಚ ಅಂತ ಬೇರೆ ರಾಜ್ಯದಲ್ಲಿ 57 ರೂ. ಪ್ರತಿ ತಿಂಗಳು ತೆಗೆದುಕೊಳ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು 71 ರೂ. ಪಡೆಯುತ್ತಾರೆ. ಈ ಮೂಲಕ 10 ವರ್ಷಕ್ಕೆ 15,500 ಕೋಟಿ ರೂ. ಸಂಗ್ರಹ ಮಾಡೋಕೆ ಸರ್ಕಾರ ಪ್ಲ್ಯಾನ್ ಮಾಡಿದೆ ಎಂದು ದೂರಿದರು.
ಯುಪಿಯಲ್ಲಿ ಬ್ಲ್ಯಾಕ್ ಲಿಸ್ಟ್ ಆಗಿರುವ ರಾಜಶ್ರೀ ಎಲೆಕ್ಟ್ರಿಕ್ ಕಂಪನಿಗೆ ಕೊಟ್ಟಿದ್ದಾರೆ. ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ಅಂತ ಸಾಫ್ಟ್‌ವೇರ್ ಮೆಂಟೇನೆನ್ಸ್‌ಗೆ ಕೊಟ್ಟಿದ್ದಾರೆ. 15,500 ಕೋಟಿ ರೂ. ಲೂಟಿ ಆಗಿದೆ. ಕೂಡಲೇ ರೀ-ಟೆಂಡರ್ ಕರೆಯಬೇಕು.ಇದರ ಬಗ್ಗೆ ಜೆಡಿಎಸ್, ಬಿಜೆಪಿ ಒಟ್ಟಾಗಿ ಅಕ್ರಮದ ಬಗ್ಗೆ ಹೋರಾಟ ಮಾಡಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಸಂವಿಧಾನದ ಬುಕ್ ಹಿಡಿದುಕೊಂಡು ಗಂಟೆ ಅಲ್ಲಾಡಿಸಿದರೆ ಆಗುವುದಿಲ್ಲ. ಡಿಕೆಶಿ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನ್ನಿಸುತ್ತಿದೆ. ಹೀಗೆ ಮಾತಾಡಿದರೆ ರಾಜ್ಯದ ಜನರೇ ಇವರ ನೆಟ್ಟು ಬೋಲ್ಟ್ ಟೈಟ್ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಬಿಜೆಪಿ ಶಾಸಕರು ರಾಜ್ಯಪಾಲರಿಗೆ ಒಟ್ಟಾಗಿ ದೂರು ಕೊಟ್ಟಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ಜೊತೆ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟ ಮಾತುಗಳಲ್ಲಿ ಉತ್ತರಿಸಿದರು.
ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಚಾರಕ್ಕೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಬೆಳ್ಳಗೆ ಮನಿ, ಸಂಜೆ ಹನಿ ಬಗ್ಗೆ ಚರ್ಚೆ ಆಗ್ತಿದೆ ಎಂದು ಎಂದು ನಿಖಿಲ್ ಕುಮಾರಸ್ವಾಮಿ ಅವರು ಬೇಸರ ವ್ಯಕ್ತ ಪಡಿಸಿದರು.
ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ವಕ್ತರ ಗಂಗಾಧರ್ ಮೂರ್ತಿ, ದೇವರಾಜು ಉಪಸ್ಥಿತರಿದ್ದರು.