ಮುಂದಿನ ಆರು ತಿಂಗಳಲ್ಲಿ 1547 ಸಬ್​ಇನ್​ಸ್ಪೆಕ್ಟರ್, 3000 ಕಾನ್​ಸ್ಟೆಬಲ್ ಭರ್ತಿ

G Parameshwar
Published on

ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ 1547 ಸಬ್ ಇನ್​ಸ್ಪೆಕ್ಟರ್ ಹಾಗೂ ಮೂರು ಸಾವಿರ ಕಾನ್​ಸ್ಟೆಬಲ್​ಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ.

ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡ ಗೃಹ ಸಚಿವ ಜಿ. ಪರಮೇಶ್ವರ, ನ್ಯಾಯಾಲಯದಿಂದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ 545 ಮಂದಿ ಸಬ್ ಇನ್​ಸ್ಪೆಕ್ಟರ್ ಹುದ್ದೆಗಳನ್ನು ಡಿಸೆಂಬರ್ ಒಳಗಾಗಿ ಭರ್ತಿ ಮಾಡಲಾಗುವುದು. ಬಳಿಕ 402 ಸಬ್ ಇನ್​ಸ್ಪೆಕ್ಟರ್​ಗಳ ಹುದ್ದೆ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಬಳಿಕ 600 ಪಿಎಸ್​ಐ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುತ್ತದೆ. ಒಟ್ಟಾರೆ 1547 ಪಿಎಸ್​ಐ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಇಲಾಖೆಗೆ ಹದಿನೈದು ಸಾವಿರ ಕಾನ್​ಸ್ಟೆಬಲ್ ಅಗತ್ಯವಿದ್ದು, ಮೊದಲು ಮೂರು ಸಾವಿರ ಕಾನ್​ಸ್ಟೆಬಲ್ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೂ ಆದಷ್ಟು ಶೀಘ್ರವಾಗಿ ಚಾಲನೆ ಕೊಡಲಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಪೋಲೀಸ್ ಸಿಬ್ಬಂದಿ ಬದಲಾಗಿ ಹೊಸಬರನ್ನು ನೇಮಕ ಮಾಡಲು ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ ಎಂದು ನಿಯಮ ಇತ್ತು. ಆದರೆ ಬಿಜೆಪಿ ಸರ್ಕಾರ ನಿಯಮ ಬದಲಿಸಿದೆ. ಮುಂದಿನ ದಿನಗಳಲ್ಲಿ ಈ ನಿಯಮವನ್ನು ಬದಲಿಸಿ ಕಾನೂನು ರೂಪಿಸಲಾಗುವುದು. ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಎರಡು ವರ್ಷಗಳ ನಂತರ ವರ್ಗಾವಣೆ ಮಾಡಬೇಕು ಎಂಬ ಕಾನೂನನ್ನು ರೂಪಿಸುವ ಉದ್ದೇಶವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net